ಜಿಲ್ಲೆ

ಉತ್ತಮ ಕಲಿಕೆಗಾಗಿ ಚಿಣ್ಣರನ್ನು ಮಕ್ಕಳ ಮನೆ ಶಾಲೆಗೆ ಸೇರಿಸಿ

ಅರಕಲಗೂಡು: ಉತ್ತಮ ಕಲಿಕೆಗಾಗಿ ಪಾಲಕರು ತಮ್ಮ ಮಕ್ಕಳನ್ನು ಮಕ್ಕಳ ಮನೆ ಶಾಲೆಗೆ ಸೇರಿಸಿ ಎಂದು ಶಾಸಕ ಎ.ಮಂಜು ಸಲಹೆ ನೀಡಿದರು.

ತಾಲೂಕಿನ ಹನ್ಯಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆ ಸಿಎಸ್‌ಆರ್ ಅನುದಾನದಡಿ 12.7 ಲಕ್ಷ ರೂ.ವೆಚ್ಚದಲ್ಲಿ ಸ್ಥಾಪಿಸಿರುವ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಮನೆಗೆ ಶೈಕ್ಷಣಿಕವಾಗಿ ಉತ್ತಮವಾದ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದು ಕಾನ್ವೆಂಟ್‌ಗಳಿಗಿಂತ ಹೆಚ್ಚಾಗಿ ಗುಣಮಟ್ಟದ ಕಲಿಕೆಗೆ ಒತ್ತು ನೀಡಲಾಗಿದೆ. ಪಾಲಕರನ್ನು ದುಬಾರಿ ಶುಲ್ಕ ತೆತ್ತು ಖಾಸಗಿ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಸೇರಿಸುವ ಬದಲು ಮಕ್ಕಳ ಮನೆಗೆ ಸೇರ್ಪಡೆಗೊಳಿಸಬೇಕು ಎಂದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸರ್ಕಾರ ಹೆಚ್ಚಿನ ಮೂಲ ಸೌಕರ್ಯಗಳು, ವಿದ್ಯಾರ್ಥಿಗಳಿಗೆ ಹಲವಾರು ಸವಲತ್ತುಗಳನ್ನು ಒದಗಿಸಿದೆ. ಸರ್ಕಾರದೊಂದಿಗೆ ಖಾಸಗಿ ಕಂಪನಿಗಳು ಕೈಜೋಡಿಸಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.

ಸಂಸ್ಥೆ ಮುಖ್ಯ ವ್ಯವಸ್ಥಾಪಕ ಎ.ಮನೋಜನ್ ಕುಮಾರ್, ಬಿ.ಕಿರಣ್ ಮಾತನಾಡಿ, ಸಂಸ್ಥೆಯ ಸಹಕಾರದಿಂದ ಮುಂದಿನ ದಿನಗಳಲ್ಲಿಯೂ ಇಂತಹ ಸೇವಾ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ 2024-25ನೇ ಸಾಲಿನಹಳೇ ಬೇರು ಹೊಸ ಚಿಗುರು ಪ್ರಗತಿಯತ್ತಾ ನಮ್ಮೂರು ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಉಪ ನಿರ್ದೇಶಕ ಚಂದ್ರಶೇಖರ್, ಬಿಇಒ ಕೆ.ಪಿ.ನಾರಾಯಣ್, ಅಬಕಾರಿ ಇಲಾಖೆ ನಿವೃತ್ತ ಅಧಿಕಾರಿ ಎಚ್.ಪಿ.ಈರಪ್ಪ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಎಚ್.ಎಸ್.ಗೋವಿಂದೇಗೌಡ, ಹಾಸನದ ಲೆಕ್ಕ ಪರಿಶೋಧನ ಇಲಾಖೆ ಅಧಿಕಾರಿ ಡಾ. ಅಶೋಕ್, ವಲಯ ಅರಣ್ಯಾಧಿಕಾರಿ ಯಶ್ಮ ಮಾಚಮ್ಮ, ಹಿರಿ ವಿದ್ಯಾರ್ಥಿ ಎಚ್.ಇ.ಮಂಜೇಗೌಡ, ಗ್ರಾಮಸ್ಥರು ಇದ್ದರು.