ಹಾಸನ: ಕೇಂದ್ರ ಸರ್ಕಾರ ಮೇ 15 ರಿಂದ ಜೂನ್ 5 ರವರೆಗೆ ಆಯೋಜಿಸಿದ್ದ ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಅಭಿಯಾನವನ್ನು ಪರಿಣಾಮಕಾರಿಯಗಿ ಅನುಷ್ಠಾನಗೊಳಿಸಿದ ಹಾಸನ ನಗರಸಭೆ ಉತ್ತಮ ಆರ್‌ಆರ್‌ಆರ್ ನಗರ ಪ್ರಶಸ್ತಿಗೆ ಭಾಜನವಾಗಿದೆ. ಗುರುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಹಾಸನ ನಗರಸಭೆ ಆಯುಕ್ತ ಸತೀಶ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸತೀಶ್ ಅವರು, ಹಾಸನ ನಗರಸಭೆ ವ್ಯಾಪ್ತಿಯಲ್ಲಿ 6 ಆರ್‌ಆರ್‌ಆರ್ ಕೇಂದ್ರಗಳನ್ನು ಸ್ಥಾಪಿಸಿ, ತ್ಯಾಜ್ಯ ಸಂಗ್ರಹಣೆ ಮಾಡಲಾಗಿದೆ. ರೆಡ್ಯೂಸ್, ರೀಯೂಸ್, ರಿಸೈಕಲ್ ಎಂಬ ಶೀರ್ಷಿಕೆ ಅಡಿ ಕುಟುಂಬಗಳಿಂದ, ಅಂಗಡಿ ಮುಂಗಟ್ಟುಗಳಿಂದ ಹಳೆ ಬಟ್ಟೆ, ಪ್ಲಾಸ್ಟಿಕ್ ವಸ್ತುಗಳು, ಪುಸ್ತಕಗಳನ್ನು ಸ್ವೀಕರಿಸಿ, ಮರು ಬಳಕೆಗೆ ಯೋಗ್ಯ ಇರುವಂತಹ ವಸ್ತುಗಳನ್ನು ಅನಾಥ ಆಶ್ರಮ, ಆಟಿಕೆ - ಪುಸ್ತಕಗಳನ್ನು ಬಾಲ ಮಂದಿರ ಮತ್ತು ಗ್ರಂಥಾಲಯಗಳಿಗೆ ನೀಡಲಾಯಿತು. ರೀ ಸೈಕಲಿಂಗ್ ಮಾಡಬಹುದಾದ ವಸ್ತುಗಳನ್ನು ಶೇಖರಿಸಿ ಇಡಲಾಗಿದೆ. ರಾಜ್ಯದ 59 ನಗರಸಭೆಗಳ ಪೈಕಿ ಹಾಸನ ನಗರಸಭೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದಕ್ಕೆ ಉತ್ತಮ ಆರ್‌ಆರ್‌ಆರ್ ನಗರ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.