ಚಾಮರಾಜನಗರ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸೈಕ್ಲಿಂಗ್ ಮಾಡುವುದು ಅತ್ಯಂತ ಸಹಕಾರಿಯಾಗಿದೆ ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್(ಮುನ್ನಾ) ಸಲಹೆ ನೀಡಿದರು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ರೆಹ್ಬರ್ ಅಸೋಸಿಯೇಷನ್ ವತಿಯಿಂದ ಪ್ರಪ್ರಥಮಬಾರಿಗೆ ಭಾನುವಾರ ಆಯೋಜಿಸಿದ್ದ ಸೈಕ್ಲಿಂಗ್ ನಡೆದ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾಕೂಟಗಳಲ್ಲಿ ಸೋಲು ಗೆಲುವು ಸಹಜ, ಆದರೇ ಭಾಗವಹಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು. ಇದೇ ಮೊದಲ ಬಾರಿಗೆ ಸೈಕ್ಲಿಂಗ್ ಮ್ಯಾರಥಾನ್ ಆಯೋಜನೆ ಮಾಡಿರುವುದು ಕ್ರೀಡಾಪಟುಗಳಿಗೆ ಅನುಕೂಲವಾಗಿದೆ ಎಂದರು.
ನೆಟ್ ಬಾಲ್ ಅಸೋಸಿಯೇಷನ್ ಜಿಲ್ಲಾ ಜಿಲ್ಲಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಯುವಕರು ಕ್ರೀಡೆಗಳಿಂದ ವಿಮುಖವಾಗುತ್ತಿದ್ದು, ಮೊಬೈಲ್ ಗೀಳು ಅವರ ಭವಿಷ್ಯವನ್ನು ಹಾಳುಮಾಡುತ್ತಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಹಲವಾರು ಕ್ರೀಡಾಕೂಟಗಳು ಜರುಗುತ್ತಿದ್ದು, ಯುವಕರು ಕ್ರೀಡೆಗಳತ್ತಾ ಮುಖಮಾಡಬೇಕು ಎಂದು ಸಲಹೆ ನೀಡಿದರು.
ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಪ್ರಾರಂಭವಾದ ಸೈಕ್ಲಿಂಗ್ ಶ್ರೀ ಭುವನೇಶ್ವರಿವೃತ್ತ, ಬಿ.ರಾಚಯ್ಯ ಜೋಡಿರಸ್ತೆ, ಡಿವಿಯೇಷನ್ ರಸ್ತೆ ಹಾಗೂ ಇನ್ನಿತರೆ ರಸ್ತೆಗಳಲ್ಲಿ ಸಾಗಿತು. ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ರೆಹ್ಬರ್ ಅಸೋಸಿಯೇಷನ್ ತರಬೇತುದಾರ ಪುರ್ಖಾನ್ ಹಾಗೂ ಪಾಲಕರು ಹಾಜರಿದ್ದರು.