ಭಾಲ್ಕಿ: ಉತ್ತಮ ಆರೋಗ್ಯ ಮತ್ತು ಶಿಸ್ತುಬದ್ಧ ಜೀವನಕ್ಕಾಗಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಲೆಕ್ಚರ್ ಕಾಲನಿಯ ಅನುಭವ ಯೋಗ ಫಿಟ್ನೆಸ್ ತರಬೇತಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಇಂದಿನ ಆಧುನಿಕ ಭರಾಟೆಯಲ್ಲಿ ಮನುಷ್ಯ ಒತ್ತಡದ ಜೀವನ ಸಾಗಿಸುತ್ತಿದ್ದಾನೆ. ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಹೆಚ್ಚಾಗಿ ಎಲ್ಲ ಕೆಲಸಕ್ಕೂ ಯಂತ್ರಗಳ ಮೊರೆ ಹೋಗುತ್ತಿರುವುದರಿಂದ ಶಾರೀರಿಕ ಶ್ರಮ ಕಡಿಮೆಯಾಗುತ್ತಿದೆ. ಹೀಗಾಗಿ ಅನೇಕ ರೋಗಗಳು ಅಂಟಿಕೊಳ್ಳುತ್ತಿವೆ. ಇದರಿಂದ ಹೊರ ಬರಲು ಪ್ರತಿಯೊಬ್ಬರೂ ಪ್ರತಿದಿನ ಯೋಗಾಭ್ಯಾಸದ ಜತೆಗೆ ಉತ್ತಮ ಜೀವನ ಶೈಲಿ ರೂಢಿಸಿಕೊಂಡು ಆರೋಗ್ಯ ಪೂರ್ಣ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಅನುಭವ ಯೋಗ ಫಿಟ್ನೆಸ್ ತರಬೇತಿ ಕೇಂದ್ರದ ಮುಖ್ಯಸ್ಥ ಓಂ ಪಾಟೀಲ್, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಮುಖರಾದ ರವೀಂದ್ರ ಚಿಡಗುಪ್ಪೆ, ಸಂಜು ಪ್ರಭಾ, ಸಂತೋಷ ವಾಡೆ, ರಾಜಕುಮಾರ ಸಿರ್ಸೆ, ಶರಣು ನಾಗಶೆಟ್ಟಿ, ಓಂ ಭಾಲ್ಕೆ, ಸಂಗಮೇಶ ಠಮಕೆ ಇದ್ದರು.
ಉಚಿತ ಯೋಗ ಶಿಬಿರ: ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಅಂಗವಾಗಿ ಅನುಭವ ಯೋಗ ಫಿಟ್ನೆಸ್ ಕೇಂದ್ರದಲ್ಲಿ ಡಿ.೧೪ ರಿಂದ ೨೧ರವರೆಗೆ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಬೆಳಿಗ್ಗೆ ೫.೩೦ಕ್ಕೆ ಪುರುಷರಿಗೆ ಮತ್ತು ಸಂಜೆ ೫.೩೦ಕ್ಕೆ ಮಹಿಳೆಯರಿಗೆ ಯೋಗ ಹೇಳಿಕೊಡಲಾಗುವುದು. ಆಸಕ್ತರು ಭಾಗವಹಿಸಬೇಕು ಎಂದು ಕೇಂದ್ರದ ಮುಖ್ಯಸ್ಥ ಓಂ ಪಾಟೀಲ್ ಹೇಳಿದರು.
ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಮೊದಲಾದ ಕ್ರಮಗಳಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸ್ಥೈರ್ಯ, ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಶಕ್ತಿ ವೃದ್ದಿಸಲು ಸಹಕಾರಿಯಾಗುತ್ತದೆ.
| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ
=======