ಜಿಲ್ಲೆ

ಉತ್ತಮ ಅಂಕ ಬರುವ ನಿರೀಕ್ಷೆ ಇತ್ತು: ಜಿಲ್ಲೆಗೆ ಪ್ರಥಮ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದ ಜೆ.ಪ್ರಣತಿ ಸಂತಸ

ಹಾಸನ: ಆರಂಭದಿಂದಲೂ ತರಗತಿಯಲ್ಲಿ ಮಾಡಿದ ಪಾಠಗಳನ್ನು ಗಮನವಿಟ್ಟು ಆಲಿಸುತ್ತಿದ್ದೆ. ಮನೆಗೆ ಬಂದು ಅವುಗಳನ್ನು ಮತ್ತೆ ಓದಿ ಮನನ ಮಾಡಿಕೊಳ್ಳುತ್ತಿದ್ದೆ. ಆದ್ದರಿಂದ ಉತ್ತಮ ಸ್ಕೋರ್ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಹಾಸನ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 3ನೇ ರ‌್ಯಾಂಕ್ ಪಡೆದ ಹಾಸನ ನಗರದ ಮಾಸ್ಟರ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜೆ. ಪ್ರಣತಿ.

ಫಲಿತಾಂಶದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಫಲಿತಾಂಶ ತುಂಬಾ ಖುಷಿ ತಂದಿದೆ. ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೆ. ಹಾಗಾಗಿ ಒಳ್ಳೆಯ ಅಂಕ ಬರುವ ನಿರೀಕ್ಷೆ ಇತ್ತು. ನಾನು ಯಾವುದೇ ಟ್ಯುಷನ್‌ಗೆ ಹೋಗಲಿಲ್ಲ. ಬದಲಿಗೆ ಶಾಲೆಯಲ್ಲಿ ಮಾಡುತ್ತಿದ್ದ ಪಾಠ ಹಾಗೂ ಕಾಲೇಜಿನಿಂದ ಕೊಡುತ್ತಿದ್ದ ಮೆಟೀರಿಯಲ್ಸ್‌ಗಳು ನನ್ನ ಓದಿಗೆ ಉತ್ತಮ ನೀಡಿದವು. ಕಾಲೇಜಿನಿಂದ ಬಂದ ಬಳಿಕವೂ ದಿನಕ್ಕೆ ಐದಾರು ಗಂಟೆ ಓದಿಕೊಳ್ಳುತ್ತಿದ್ದೆ. ನಾನು ಹೆಚ್ಚಾಗಿ ಬೆಳಗ್ಗಿನ ಸಮಯದಲ್ಲಿ ಓದಿಕೊಳ್ಳುತ್ತಿದ್ದೆ ಎಂದು ಹೇಳುತ್ತಾರೆ.

ನಮ್ಮ ತಂದೆ ಜಗದೀಶ್ ಅವರು ಪ್ರೌಢಶಾಲೆಯ ಶಿಕ್ಷಕರು ತಾಯಿ ಚಂದ್ರಕಲಾ ಪ್ರೈಮರಿ ಶಾಲೆಯ ಶಿಕ್ಷಕರು. ಇಬ್ಬರಿಂದಲೂ ನನಗೆ ಉತ್ತಮ ಪ್ರೇರಣೆ, ಮಾರ್ಗದರ್ಶನ ಸಿಕ್ಕಿದೆ. ಓದುವುದಕ್ಕೆ ಅವರು ಎಂದೂ ಒತ್ತಡ ಹೇರಿದವರಲ್ಲ. ಹೀಗಾಗಿ ನಾನು ಯಾವುದೇ ಒತ್ತಡ, ಭಯವಿಲ್ಲದೆ ಓದಲು ಸಹಕಾರಿಯಾಯಿತು. ಇಂದು ಈ ಅಂಕ ಪಡೆಯಲು ತಂದೆ-ತಾಯಿ ಸಹಕಾರ ದೊಡ್ಡದಿದೆ. ಮುಂದೆ ವೈದ್ಯೆಯಾಗಬೇಕು ಅಥವಾ ಐಎಎಸ್ ಆಗಬೇಕು ಎಂಬ ಕನಸಿದೆ. ಸದ್ಯಕ್ಕೆ ಈಗ ಮೆಡಿಕಲ್ ಸೀಟಿಗಾಗಿ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ ಎಂದು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಜೆ.ಪ್ರಣತಿ ಅವರು ಸಂತಸದಿಂದ ಹೇಳಿಕೊಂಡರು.