ಜಿಲ್ಲೆ

ಉಣಕಲ್ಲ ಕೆರೆಯಲ್ಲಿ ಹೆಚ್ಚಿದ ಜಲಕಳೆ

ಹುಬ್ಬಳ್ಳಿ: ಉಣಕಲ್ಲ ಕೆರೆಯಲ್ಲಿ ಕಳೆದ ತಿಂಗಳು ನಡೆಸಿದ್ದ ಬೆಥಮೆಟೆಕ್ ಮತ್ತು ಸಬ್​ವಿುಟೆಷನ್ ಸರ್ವೆಯ ವರದಿಯಿಂದಾಗಿ ಕೆರೆಯಲ್ಲಿ ತುಂಬಿರುವ ಹೂಳಿನ ಆಳ, ಜಲಕಳೆ ನಿಯಂತ್ರಣಕ್ಕೆ ಬಾರದಿರಲು ಕಾರಣ ಸೇರಿದಂತೆ ಹಲವಾರು ಮಹತ್ವದ ಅಂಶಗಳು ಬಹಿರಂಗಗೊಂಡಿವೆ.

ಮಂಗಳೂರು ಮೂಲದ ಜಿಯೊಮೆರಿನ್ ಸೊಲ್ಯುಷನ್ ಎಂಬ ಸಂಸ್ಥೆ ಉಣಕಲ್ಲ ಕೆರೆಯಲ್ಲಿ ಸತತ 3 ದಿನಗಳವರೆಗೆ ಸರ್ವೆ ನಡೆಸಿ, ಕೆರೆಯ ಆಳದಲ್ಲಿನ ಹೂಳು, ಮಣ್ಣು, ಹರಳುಗಳನ್ನು ಸಂಗ್ರಹಿಸಿತ್ತು.

ಒಂದು ಕಾಲದಲ್ಲಿ ಹುಬ್ಬಳ್ಳಿಗೆ ಕುಡಿಯುವ ನೀರಿನ ಮೂಲವಾಗಿದ್ದ ಉಣಕಲ್ಲ ಕೆರೆ ಸಂಪೂರ್ಣ ಹದಗೆಟ್ಟಿದೆ. ಕೆರೆಯ ಆಳದ ಅರ್ಧಕ್ಕಿಂತ ಹೆಚ್ಚಿನ ಭಾಗ ಹೂಳು ತುಂಬಿಕೊಂಡಿದೆ. ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆಯ ನೀರಿನಲ್ಲಿನ ಕ್ರೋಮಿಯಂ ಎಂಬ ರಾಸಾಯನಿಕ ಅಂಶ ಕಡಿಮೆಯಾಗಿದೆ. ಪಿಶಾಚಿ ಕಳೆ ನಿಯಂತ್ರಣಕ್ಕೆ ಬಾರದಿರಲು ನೀರಿನಲ್ಲಿಯ ರಾಸಾಯನಿಕ ಪ್ರಮಾಣ ಕುಸಿತವೇ ಕಾರಣವಾಗಿದೆ.

ಸಾಮಾನ್ಯ ನೀರಿನಲ್ಲಿ ಕ್ರೋಮಿಯಂ ಅಂಶ 230 ಪಿಪಿಎಂ ಇರಬೇಕು. ಆದರೆ, ಉಣಕಲ್ಲ ಕೆರೆಯ ನೀರಿನಲ್ಲಿ ಈ ರಾಸಾಯನಿಕ ಪ್ರಮಾಣ 29.7ರಷ್ಟಿದೆ. 7 ಪಟ್ಟಿಗಿಂತ ಹೆಚ್ಚಿನ ಕ್ರೋಮಿಯಂ ಅಂಶ ಕಡಿಮೆಯಾಗಿದೆ. 400 ಪಿಪಿಎಂ ರಷ್ಟಿರಬೇಕಿದ್ದ ಸೀಸದ ಪ್ರಮಾಣ 4.5 ಪಿಪಿಎಂಗೆ ಇಳಿದಿದೆ.

ಸ್ಮಾರ್ಟ್​ಸಿಟಿ ಯೋಜನೆಯಡಿ ಸುಮಾರು 4.06 ಲಕ್ಷ ರೂ. ವೆಚ್ಚದಲ್ಲಿ ಉಣಕಲ್ಲ ಕೆರೆಯ ಆಳ ಹಾಗೂ ಇತರ ಮಾಹಿತಿ ಸಂಗ್ರಹಿಸುವುದಕ್ಕಾಗಿ ಸರ್ವೆ ನಡೆಸಲಾಗಿತ್ತು.

ರಾಸಾಯನಿಕ ಪದಾರ್ಥಗಳಾದ ಕ್ಯಾಡ್ಮಿಯಂ, ಕ್ರೋಮಿಯಂ, ಮರ್ಕ್ಯೂರಿ, ಅರ್ಸೆನಿಕ್, ನೈಟ್ರೋಜನ್​ಗಳು ಕೆರೆಯ ನೀರಿನಲ್ಲಿ ಎಷ್ಟು ಪ್ರಮಾಣದಲ್ಲಿವೆ ಎಂಬ ಮಾಹಿತಿಯನ್ನು ಸರ್ವೆ ವರದಿಯಲ್ಲಿ ವಿವರಿಸಲಾಗಿದೆ.

2017-18 ರಲ್ಲಿ ಅಂದಾಜು 18 ಲಕ್ಷ ರೂ. ವೆಚ್ಚದಲ್ಲಿ ಮಹಾನಗರ ಪಾಲಿಕೆ ಕೆರೆಯಲ್ಲಿನ ಜಲಕಳೆಯನ್ನು ತೆಗೆಯಿಸಿ ಸ್ವಚ್ಛಗೊಳಿಸಿತ್ತು. ಆದರೆ ಜಲಕಳೆ ಬೆಳೆಯಲು, ರಾಸಾಯನಿಕ ಅಂಶ ಈ ನೀರಿನಲ್ಲಿ ದಿನದಿಂದ ದಿನಕ್ಕೆ ಕಡೆಯಾಗುತ್ತಿರುವುದು ಪ್ರಮುಖ ಕಾರಣ ಎಂಬ ಬಗ್ಗೆ ಮಹಾನಗರ ಪಾಲಿಕೆಗೆ ಗೊತ್ತೇ ಇರಲಿಲ್ಲ.

ಹೂಳು: ಈ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ 0.08 ಟಿಎಂಸಿ ಅಡಿ. ಆದರೆ, ಸದ್ಯ ಸಂಗ್ರಹಗೊಳ್ಳುತ್ತಿರುವ ನೀರಿನ ಪ್ರಮಾಣ 0.059 ಟಿಎಂಸಿ ಅಡಿ ಮಾತ್ರ. ಅಂದಾಜು 15 ಮೀಟರ್ ಆಳದ ಕೆರೆಯಲ್ಲಿ 8-10 ಮೀ.ನಷ್ಟು ಹೂಳು ತುಂಬಿರುವುದು ಇದಕ್ಕೆ ಕಾರಣ ಎಂದು ಸಮೀಕ್ಷಾ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಹೀಗಾಗಿ ಸ್ವಲ್ಪ ಪ್ರಮಾಣದ ಮಳೆಯಾದರೂ ನೀರು ಕೆರೆಯಲ್ಲಿ ಸಂಗ್ರಹಗೊಳ್ಳದೇ ಹರಿದು ಹೋಗುತ್ತದೆ.

1978ರ ನಂತರ ಉಣಕಲ್ಲ ಕೆರೆಯ ಹೂಳು ತೆಗೆದಿಲ್ಲ. ಕೆರೆಯ ಹೂಳಿನಲ್ಲಿರುವ ಮಣ್ಣು ಕೃಷಿಗೆ ಯೋಗ್ಯವಾಗಿದೆ. ಫಲವತ್ತಾದ ಈ ಮಣ್ಣನ್ನು ಹೊಲಕ್ಕೆ ಹಾಕುವುದರಿಂದ ರೈತರು ಉತ್ತಮ ಬೆಳೆ ಬೆಳೆಯಬಹುದೆಂಬ ಮಾಹಿತಿಯೂ ವರದಿಯಲ್ಲಿದೆ.

ಟೆಂಡರ್ ಪ್ರಕ್ರಿಯೆ ವಿಚಾರಣೆ

ಮಂಗಳೂರು ಮೂಲದ ಸಂಸ್ಥೆ ನೀಡಿದ ವರದಿಯನ್ನಾಧರಿಸಿ ಉಣಕಲ್ಲ ಕೆರೆಯ ನೀರು ಸ್ವಚ್ಛಗೊಳಿಸಲು ಹು-ಧಾ ಸ್ಮಾರ್ಟ್​ಸಿಟಿ ಕಂಪನಿ ಮುಂದಾಗಿದೆ. ಇದಕ್ಕಾಗಿ 15 ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದೆ. ಬೆಂಗಳೂರಿನ ಅಲಸೂರು ಕೆರೆಯಲ್ಲಿ ಜಲಕಳೆ ನಿರ್ನಾಮಗೊಳಿಸಿ, ನೀರು ಸ್ವಚ್ಛಗೊಳಿಸಿದ್ದ ಸಂಸ್ಥೆಯೊಂದು ಟೆಂಡರ್ ಪ್ರಕ್ರಿಯೆಗಳ ಬಗ್ಗೆ ವಿಚಾರಣೆ ನಡೆಸಿದೆ.

ಕಳೆದ ತಿಂಗಳು ಸರ್ವೆ ನಡೆಸಿದ್ದ ಮಂಗಳೂರು ಮೂಲದ ಸಂಸ್ಥೆ ನೀಡಿದ ವರದಿ ಕೆರೆ ಸ್ವಚ್ಛತಾ ಕಾರ್ಯಕ್ಕೆ ಸಹಾಯಕವಾಗಲಿದೆ.- ಎಸ್.ಎಚ್. ನರೇಗಲ್,ವಿಶೇಷ ಅಧಿಕಾರಿ, ಹು-ಧಾ ಸ್ಮಾರ್ಟ್​ಸಿಟಿ ಕಂಪನಿ

EndFragment