ಜಿಲ್ಲೆ

ಉಣಕಲ್ಲ ಕೆರೆಯಲ್ಲಿ ಬೆಂಬಿಡದ ಪಿಶಾಚಿ

ಬಸವರಾಜ ಇದ್ಲಿ ಹುಬ್ಬಳ್ಳಿ

ಹುಬ್ಬಳ್ಳಿ- ಧಾರವಾಡ ಅವಳಿ ನಗರ ಮಧ್ಯದ ಏಕೈಕ ಜಲಮೂಲ ಉಣಕಲ್ಲ ಕೆರೆಗೆ ಪಿಶಾಚಿ ತಾವರೆ ಬೆಂಬಿಡದ ಭೂತದಂತಾಗಿದೆ. ಅಂತಹ ಜಲಕಳೆ ನಿಮೂಲನೆಗೆ ಕಳೆದ ಹತ್ತಾರು ವರ್ಷಗಳಿಂದ ಪ್ರತಿ ವರ್ಷ ಒಂದಿಲ್ಲೊಂದು ಪ್ರಯತ್ನಗಳು ನಡೆಯುತ್ತಲೇ ಇವೆ.

ಜಲಕಳೆ ನಿಮೂಲನೆ ಮಾಡಿ ಕೆರೆ ಪುನರುಜ್ಜೀವನಗೊಳಿಸುವ ಹೆಸರಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಕಳೆ ಮಾತ್ರ ಇನ್ನೂ ಹೋಗಿಲ್ಲ. ಹಾಗಾಗಿ ಇದುವರೆಗಿನ ಎಲ್ಲ ಪ್ರಯತ್ನಗಳು ನೀರಲ್ಲಿ ಹೋಮ ಮಾಡಿದಂತಾಗಿದೆ.

ಪ್ರಸ್ತುತ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ಕೆರೆ ನವೀಕರಣ ಕಾರ್ಯ ಕೈಗೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಕೆರೆಯಲ್ಲಿನ ಜಲಕಳೆಯನ್ನು ಹಿಟಾಚಿ ಮೂಲಕ ಹೊರ ಹಾಕಲಾಗುತ್ತಿದೆ. ಎರಡು ತಿಂಗಳಿಂದ ಈ ಕಾರ್ಯ ಭರದಿಂದ ಸಾಗಿದ್ದು, ಎಷ್ಟು ವೇಗದಲ್ಲಿ ಕಳೆ ತೆಗೆದು ಸಾಗಿಸಲಾಗುತ್ತಿದೆಯೋ ಅದೇ ವೇಗದಲ್ಲಿ ಪುನಃ ಬೆಳೆಯುವ ಮೂಲಕ ಸ್ವಚ್ಛಗೊಳಿಸಿಲ್ಲವೇನೋ ಎಂಬಂತೆ ಕೆರೆ ಕಾಣುತ್ತಿದೆ.

ವಿಪರ್ಯಾಸವೆಂದರೆ ಕಳೆ ಸಂಪೂರ್ಣ ತೆಗೆದು ಹಾಕಿದ ನಂತರ ಪುನಃ ಬೆಳೆಯದಂತೆ ಜೈವಿಕ ವಿಧಾನ ಅಳವಡಿಸುವ ಯೋಜನೆ ರೂಪಿಸಲಾಗಿದ್ದು, ಅದರಂತೆ ಪ್ರಾಯೋಗಿಕವಾಗಿ ಉಳವಿ ಚನ್ನಬಸವೇಶ್ವರ ದೇವಸ್ಥಾನ ಬಳಿ ಏರೇಟರ್ಸ್ ಅಳವಡಿಸಲಾಗಿತ್ತು. ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚು ಮಾಡುವ ಈ ವಿಧಾನ ಕಳೆ ಪುನಃ ಬೆಳೆಯದಂತೆ ತಡೆಯುತ್ತದೆ. ಪ್ರಾಯೋಗಿಕ ಸ್ಥಳದಲ್ಲಿ ಒಂದೆರಡು ವಾರ ಕಳೆ ಬೆಳೆದಿರಲಿಲ್ಲ. ಆದರೆ, ಕಳೆದ ವಾರ ಅಲ್ಲಿ ಪುನಃ ಕಳೆ ಬೆಳೆಯುವ ಮೂಲಕ ಸ್ಮಾರ್ಟ್​ಸಿಟಿ ಯೋಜನೆ ವಿಫಲತೆಯತ್ತ ಸಾಗಿತೇ ಎಂಬ ಆತಂಕ ಮೂಡಿಸಿದೆ. ಪಿಶಾಚಿ ತಾವರೆ ಮಾತ್ರ ಮತ್ತೆ ಮತ್ತೆ ಪುಟಿದೇಳುತ್ತಿದೆ.

ಗಾಮನಗಟ್ಟಿ, ಭೈರಿದೇವರಕೊಪ್ಪ ಸೇರಿ ಉಣಕಲ್ಲ ಕೆರೆಗೆ ಕೊಳಚೆ ನೀರು ಸೇರುವ ಅಂದಾಜು 16 ಕಡೆಗಳಲ್ಲಿ ಏರೇಟರ್ಸ್ ಅಳವಡಿಸುವ ಯೋಜನೆ ಇದೆ. ಇದರಿಂದ ಕಳೆ ಪುನಃ ಬೆಳೆಯುವುದಿಲ್ಲ. ಪ್ರಾಯೋಗಿಕ ಸ್ಥಳದಲ್ಲಿ ಕಳೆ ಪುನಃ ಬೆಳೆದಿಲ್ಲ, ಅದು ಗಾಳಿಗೆ ಹರಿದು ಬಂದ ಕಳೆಯಾಗಿದೆ. ಇನ್ನೆರಡು ತಿಂಗಳಲ್ಲಿ ಸಂಪೂರ್ಣ ಕೆರೆ ಕಳೆ ಮುಕ್ತವಾಗಲಿದ್ದು, ನಂತರದ ದಿನಗಳಲ್ಲಿ ಕೆರೆ ಚಿತ್ರಣ ಬದಲಾಗಲಿದೆ. | ಎಸ್.ಎಚ್. ನರೇಗಲ್ಲ
ಹುಧಾ ಸ್ಮಾರ್ಟ್​ಸಿಟಿ ಲಿಮಿಟೆಡ್ ವಿಶೇಷಾಧಿಕಾರಿ

ಅಂತರ್ಜಲ ಸಾಕಷ್ಟಿದೆ: ಈ ಹಿಂದೆ ಕೆರೆ ಖಾಲಿ ಮಾಡಿದರೆ ಅಂತರ್ಜಲ ಕುಸಿದು ಹೋಗುವುದೋ ಎಂಬ ಭಯ ಆಡಳಿತ ವರ್ಗವನ್ನು ಕಾಡಿತ್ತು. ಆದರೆ, ಕಳೆದ ಎರಡು ವರ್ಷದಿಂದ ಹೆಚ್ಚು ಮಳೆಯಾಗಿದೆ. ಉಣಕಲ್ಲ ಅಕ್ಕಪಕ್ಕದ ಬಹುತೇಕ ಕೆರೆಗಳು ತುಂಬಿವೆ. ಅಲ್ಲದೆ ಎಲ್ಲ ಕಡೆ ಅಂತರ್ಜಲ ಪ್ರಮಾಣವೂ ಹೆಚ್ಚಾಗಿದೆ. ಹಾಗಾಗಿ ಅಂತರ್ಜಲ ಕುಸಿಯುವ ಸಾಧ್ಯತೆ ತೀರಾ ಕಡಿಮೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಾಧಕ- ಬಾಧಕ ಚರ್ಚೆ ಮಾಡಿ ಮುಂದಡಿ ಇಡಬಹುದಾಗಿದೆ ಎಂಬುದು ಗ್ರಾಮಸ್ಥರು, ಸಾರ್ವಜನಿಕರ ಅಭಿಪ್ರಾಯ. ಇಲ್ಲದೆ ಹೋದರೆ ಕಳೆ ಹೆಸರಲ್ಲಿ ಪ್ರತಿ ವರ್ಷ ಒಂದಿಲ್ಲೊಂದು ಕಂಪನಿ ‘ಬೆಳೆ’ ಬೆಳೆದುಕೊಂಡು ಹೋಗುವುದನ್ನು ಪರಿಸರ ಪ್ರೇಮಿಗಳು, ಸಾರ್ವಜನಿಕರು ಮೂಕ ಪ್ರೇಕ್ಷಕರಂತೆ ನೋಡುತ್ತ ಕುಳಿತುಕೊಳ್ಳಬೇಕಾಗುತ್ತದೆ.

ಇದೇನು ಮೊದಲಲ್ಲ: ಉಣಕಲ್ಲ ಕೆರೆ ಕ್ಲೀನಿಂಗ್ ಹಾಗೂ ಸೌಂದಯೀಕರಣದ ಪ್ರಯತ್ನಗಳು ಇದೇ ಮೊದಲಲ್ಲ. ಆರಂಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಕೂಲಿ ಕಾರ್ವಿುಕರನ್ನು ಬಳಸಿಕೊಂಡು ಒಂದೆರಡು ವರ್ಷ ಕಳೆ ತೆಗೆಯುವ ಪ್ರಯತ್ನ ಮಾಡಿದರು. ನಂತರ ಹೈದರಾಬಾದ್ ಮೂಲದ ಕಂಪನಿಯೊಂದು ಮಷಿನ್ ಮೂಲಕ ಕಳೆ ತೆಗೆಯಲು ಆರಂಭಿಸಿ ಅರ್ಧಕ್ಕೆ ಬಿಟ್ಟು ಹೋಯಿತು. ಇದಾದ ಬಳಿಕ ದೇಶಪಾಂಡೆ ಫೌಂಡೇಷನ್​ನವರು ಕಳೆ ಕಿತ್ತು ನೀರಿಗೆ ಒಂದಿಷ್ಟು ರಾಸಾಯನಿಕ ಸಿಂಪಡಿಸುವ ಪ್ರಯತ್ನ ಮಾಡಿದರು. ನಂತರದಲ್ಲಿ ಉಣಕಲ್ಲ ಗೆಳೆಯರ ಬಳಗದ ಹತ್ತಾರು ಜನರು ಎರಡು ವರ್ಷದ ಹಿಂದೆ ಹಣ ಹಾಗೂ ಶ್ರಮದಾನದ ಮೂಲಕ ಕಳೆ ಕಿತ್ತು ಹಾಕಿದ್ದರು. ಆದರೆ, ನಿರ್ವಹಣೆ ಕೊರತೆಯಿಂದ ಮತ್ತೆ ಕಳೆ ಬೆಳೆದು ನಿಂತಿದೆ. ಇದೀಗ ಸ್ಮಾರ್ಟ್ ಸಿಟಿ ಕಂಪನಿಯ ಸರದಿ. ಹಿಂದಿನ ಎಲ್ಲ ಪ್ರಯತ್ನಗಳ ಬಗ್ಗೆ ಅಧ್ಯಯನ ನಡೆಸಿ ಈ ಬಾರಿ ಶತಾಯಗತಾಯ ಕಳೆ ನಿಮೂಲನೆಯ ಪಣ ತೊಟ್ಟಿದೆ. ಇಲ್ಲಿಯೂ ನೂರೆಂಟು ಸಮಸ್ಯೆಗಳು ಎದುರಾಗಿವೆ. ಕಳೆ ಕಿತ್ತು ಹಾಕಿದಂತೆ ಪುನಃ ಬೆಳೆಯುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ, ಒಂದೊಮ್ಮೆ ಏರೇಟರ್ಸ್ ಅಳವಡಿಸಿದ ಮೇಲೆ ಕಳೆ ಬೆಳೆಯದಂತೆ ಮಾಡಿದ ಪ್ರಾಯೋಗಿಕ ಸ್ಥಳದಲ್ಲಿಯೇ ಮತ್ತೆ ಕಳೆ ಕಾಣಿಸಿಕೊಂಡಿರುವುದು ಜನರ ಸಂಶಯಕ್ಕೆ ಕಾರಣವಾಗಿದೆ.

ಹಣ ಹಾಳಾಗದಿರಲಿ…: ಈಗಾಗಲೇ ಉಣಕಲ್ಲ ಕೆರೆ ಸ್ವಚ್ಛತೆ ಹೆಸರಲ್ಲಿ ಹತ್ತಾರು ಕೋಟಿ ರೂ. ನಷ್ಟವಾಗಿದೆ. ಇದೇ ರೀತಿ ಅಧಿಕಾರಿಗಳು ಪ್ರಯೋಗಗಳನ್ನು ಮಾಡುತ್ತ ಹೋದರೆ ಮತ್ತಷ್ಟು ಕೋಟಿ ರೂ. ಕಳೆದುಕೊಳ್ಳಬೇಕಾಗುತ್ತದೆಯೇ ಹೊರತು ಕೆರೆ ಮೊದಲಿನಂತೆ ಅಂದವಾಗಿ ಕಾಣುವುದಿಲ್ಲ. ಹಾಗಾಗಿ ಕೆರೆಯನ್ನು ಸಂಪೂರ್ಣ ಬರಿದು ಮಾಡಿ ಹೂಳೆತ್ತುವ ಮೂಲಕ ಕಳೆಯ ಮೂಲೋತ್ಪಾಟನೆ ಮಾಡಿ ಎನ್ನುತ್ತಿದ್ದಾರೆ ತಿಳಿದವರು.