ಬೀರೂರು: ಹೊಗರೇಹಳ್ಳಿ ಗ್ರಾಮದ ಶ್ರೀ ಉಡುಸಲಮ್ಮ ದೇವಿ ನೂತನ ರಥ ಅನಾವರಣ ಹಾಗೂ ರಥೋತ್ಸವ ಕಾರ್ಯಕ್ರಮ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಸೋಮವಾರ ಆರಂಭವಾದ ಧಾರ್ವಿುಕ ಕಾರ್ಯಕ್ರಮದಲ್ಲಿ ನೂತನ ರಥದ ಪುಣ್ಯಾಹ, ಧ್ವಜಾರೋಹಣ, ಗಣಪತಿ ಪೂಜೆ, ಉಮಾಮಹೇಶ್ವರ, ಪಂಚಕಳಸ, ವಾಸ್ತು ಲಕ್ಷ್ಮೀ ಸಪ್ತ ಮಾತೃಕೆಯರು, ಅಷ್ಟ ದಿಕ್ಪಾಲಕ, ನವಗ್ರಹ, ಮೃತ್ಯುಂಜಯ ವಾಸ್ತುಹೋಮ, ಗಣಹೋಮ, ನವಗ್ರಹ ಹೋಮ, ನಂತರ ಬಲಿಪೂಜೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಗಿತ್ತು.
ಮಂಗಳವಾರ ಪಾನಕದ ಬಂಡಿ ಉತ್ಸವ, ರಾತ್ರಿ ದುಗ್ಗಳ ಆರತಿ ಹಾಗೂ ಅಮ್ಮನ ಉತ್ಸವ ದೇವಸ್ಥಾನಕ್ಕೆ ಆಗಮಿಸಿತು. ಬುಧವಾರ ನೂತನ ರಥಕ್ಕೆ ಕಳಸಾರೋಹಣ ನೆರವೇರಿತು. ರಥದ ಚಾಲನೆ ನಂತರ ಪ್ರಸಾದ ವಿನಿಯೋಗಿಸಲಾಯಿತು. ಈ ವರ್ಷದ ಬಾವುಟವನ್ನು 3 ಲಕ್ಷ ರೂ.ಗೆ ಸಮತಳ ಗ್ರಾಮದ ಸುಜಯ್ ಎಂಬುವರು ಹರಾಜು ಕೂಗಿ ತಮ್ಮದಾಗಿಸಿಕೊಂಡು ಮೊದಲನೇ ಮಹಾ ಮಂಗಳಾರತಿಗೆ ಭಾಜನರಾದರು. ಸಂಜೆ ಅಮ್ಮನವರ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ರಸಮಂಜರಿ ಕಾರ್ಯಕ್ರಮ ಜರುಗಿದವು. ಬೀರೂರು, ಆಲದಹಳ್ಳಿ, ಬಳ್ಳಿಗನೂರು, ಹೂವಿನಹಳ್ಳಿ ಹಾಗೂ ಮುಂಡ್ರೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.