ಉಡುಪಿ: ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಸೇನೆ ನೇಮಕಾತಿ ರ‌್ಯಾಲಿಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ರ‌್ಯಾಲಿಗೆ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಸೇನಾ ನೇಮಾಕಾತಿ ಮಂಗಳೂರು ವಿಭಾಗದ ಮುಖ್ಯಸ್ಥ ಕರ್ನಲ್ ದುಭಾಶ್ ಉಪಸ್ಥಿತರಿದ್ದರು. ಮೊದಲ ದಿನ ಬುಧವಾರ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ 3 ಸಾವಿರ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. 1600 ಮೀಟರ್ ಓಟ, ಜಿಗ್‌ಜಾಗ್, ಪುಲ್ ಅಪ್ಸ್, ಉದ್ದ ಜಿಗಿತ ದೈಹಿಕ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು. ದಾಖಲಾತಿ ಪರಿಶೀಲನೆಗೆ ಪ್ರೌಢಶಾಲೆ ವಿಭಾಗದ ದೈಹಿಕ ಶಿಕ್ಷಕರನ್ನು ನೇಮಿಸಲಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಗುರುವಾರ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ರ‌್ಯಾಲಿಯಲ್ಲಿ ಪಾಲ್ಗೋಳ್ಳಲು ದೂರದ ಊರುಗಳಿಂದ ಮಧ್ಯರಾತ್ರಿ ಉಡುಪಿಗೆ ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಉಡುಪಿಗೆ ಆಗಮಿಸಿದ್ದರು.ಸೇನೆ ಕೋವಿಡ್ ಮಾರ್ಗಸೂಚಿ ಪ್ರಕಾರ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಕೋವಿಡ್ ನೆಗೆಟಿವ್ ಇದ್ದವರು ಮಾತ್ರ ರ‌್ಯಾಲಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಬಿಸಿಲ ದಗೆಯಲ್ಲೂ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇಂದಿನಿಂದ 10 ದಿನಗಳ ಕಾಲ ರ‌್ಯಾಲಿ ನಡೆಯಲಿದ್ದು, 38 ಸಾವಿರ ಮಂದಿ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಕೃಷ್ಣಮಠ ಮತ್ತು ಮೆಸ್ಕಾಂ ಗುತ್ತಿಗೆ ನೌಕರರ ಸಂಘದ ವತಿಯಿಂದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿದೆ.