ಉಡುಪಿ: ಜಿಲ್ಲೆಯಲ್ಲಿ ಇಬ್ಬರಿಗೆ ಕರೊನಾ ವೈರಸ್ ಸೋಂಕು ತಗುಲಿರುವುದು ವರದಿಯಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿದ್ದು, ಜಿಲ್ಲೆಯ ಜನತೆಯಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.
ಉಡುಪಿಯ 35 ವರ್ಷದ ವ್ಯಕ್ತಿ ಕರೊನಾ ವೈರಸ್ ರೋಗದ ಲಕ್ಷಣ ಹಿನ್ನೆಲೆಯಲ್ಲಿ ಮಾ.27ರಂದು ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಮಾರ್ಚ್ 17ರಂದು ದುಬೈನಿಂದ ಆಗಮಿಸಿದ್ದರು ಎಂದು ಡಿಎಚ್‌ಒ ತಿಳಿಸಿದ್ದಾರೆ. ಇನ್ನೊಬ್ಬರು 29 ವರ್ಷದ ವ್ಯಕ್ತಿ ಉಡುಪಿಯಲ್ಲಿ ಇಲೆಕ್ಟ್ರಿಕಲ್ ಕೆಲಸ ಮಾಡುವವರಾಗಿದ್ದಾರೆ. ಕೆಲಸದ ಪ್ರಯುಕ್ತ ಕೇರಳದ ತಿರುವನಂತಪುರಕ್ಕೆ ತೆರಳಿದ್ದು, ಕರೊನಾ ಲಕ್ಷಣ ಹಿನ್ನೆಲೆಯಲ್ಲಿ ಮಾ.26ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರು ರೋಗಿಗಳ ಪಾಸಿಟಿವ್ ವರದಿ ಭಾನುವಾರ ಜಿಲ್ಲಾಡಳಿತ ಕೈಸೇರಿದೆ. ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ಐಸೊಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಮೂವರು ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಡಿಎಚ್‌ಒ ಡಾ.ಸೂಡ ತಿಳಿಸಿದ್ದಾರೆ.
29 ವರ್ಷದ ವ್ಯಕ್ತಿ ಕೆಲಸ ಮುಗಿಸಿ ಮಾ.24 ರಂದು ಕೆರಳ-ಕರ್ನಾಟಕ ಗಡಿ ಮೂಲಕ ಉಡುಪಿಗೆ ಆಗಮಿಸುತ್ತಿದ್ದಾಗ ತಲಪಾಡಿ ಗಡಿಯಲ್ಲಿ ಆರೋಗ್ಯ ಇಲಾಖೆ-ಪೊಲೀಸ್ ಸಿಬ್ಬಂದಿ ತಡೆದು ಸ್ಕ್ರೀನಿಂಗ್ ನಡೆಸಿದ್ದಾರೆ. ಬಳಿಕ ಪ್ರತ್ಯೇಕ ವಾಹನದಲ್ಲಿ ಕೆಲವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕಳುಹಿಸಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದ 35 ವರ್ಷದ ವ್ಯಕ್ತಿ ಸ್ಥಳೀಯವಾಗಿ ಓಡಾಡಿದ್ದಾರೆಯೇ? ಯಾರ‌್ಯಾರೊಂದಿಗೆ ಭೇಟಿಯಾಗಿದ್ದರು, ಯಾರ ಸಂಪರ್ಕದಲ್ಲಿದ್ದರು ಎಂಬ ವಿವರವನ್ನು ಆರೋಗ್ಯ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ.
970 ಮಂದಿ ಕ್ವಾರಂಟೈನ್‌ನಲ್ಲಿ: ಉಡುಪಿ ಜಿಲ್ಲೆಯಲ್ಲಿ ಮನೆ ಮತ್ತು ಆಸ್ಪತ್ರೆಯಲ್ಲಿ ಒಟ್ಟು 970 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 842 ಮಂದಿ 14 ದಿನ, 95 ಮಂದಿ 28 ದಿನಗಳ ಕಾಲ ಹೋಂ ಕ್ವಾರಂಟೈನ್ ಪೂರೈಸಿದ್ದಾರೆ. ಇಲ್ಲಿವರೆಗೆ 128 ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದ್ದು, 122 ಮಂದಿಯ ವರದಿ ನೆಗೆಟಿವ್ ಬಂದಿದೆ. ಮೂರು ವರದಿ ಪಾಸಿಟಿವ್ ಎಂದು ದೃಢಪಟ್ಟಿದೆ. ಇನ್ನೂ ಮೂರು ವರದಿ ಬಲು ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ಆತಂಕ ಬೇಡ ಎಂದ ಸಚಿವ:ಉಡುಪಿಯಲ್ಲಿ ಮೂವರು ಪಾಸಿಟಿವ್ ಸೊಂಕಿತರ ಮೇಲೆ ನಿಗಾ ಇರಿಸಲಾಗಿದೆ. ಇವರಿಂದ ಆಗಿರುವ ಪ್ರೈಮರಿ ಕಾಂಟ್ಯಾಕ್ಟ್‌ಗಳನ್ನು ಗುರುತಿಸಿ ಅವರನ್ನು ಕ್ವಾರಂಟೈನ್ ಮಾಡಿದ್ದೇವೆ ಎಂದು ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಜಿಲ್ಲೆಯ ಜನತೆಯನ್ನು ಉದ್ದೇಶಿಸಿ ವಿಡಿಯೋ ಸಂದೇಶ ಕಳುಹಿಸಿದ ಅವರು, ಕರೊನಾ ತಡೆಯಲು ಜಿಲ್ಲೆಯ ಜನತೆ ಇತರೆ ಜಿಲ್ಲೆಗಳಿಗಿಂತ ಅತ್ಯಂತ ಶಿಸ್ತು, ಸಂಯಮದಿಂದ ಲಾಕ್‌ಡೌನ್ ಪಾಲಿಸುತ್ತಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯವಿಲ್ಲ. ಮುಂಬರುವ ದಿನಗಳಲ್ಲಿ ಸಾರ್ವತ್ರಿಕ 500 ಬೆಡ್‌ನ ಕ್ವಾರಂಟೈನ್ ವ್ಯವಸ್ಥೆ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಉಸ್ತುವಾರಿ ಸಚಿವರು ನಾಪತ್ತೆ, ಜಿಲ್ಲೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಚಿವರ ವಿರುದ್ಧ ಟೀಕೆ ವ್ಯಕ್ತವಾಗಿತ್ತು.