ಜಿಲ್ಲೆ

ಉಡುಗೊರೆ ಹಣ ಗೋಶಾಲೆಗೆ

ಬೀದರ್: ತಮ್ಮ ಮಕ್ಕಳ ಶಾಲು ಹೊದಿಸುವ ಕಾರ್ಯಕ್ರಮಕ್ಕೆ ಉಡುಗೊರೆ ರೂಪದಲ್ಲಿ ಬಂದ ಹಣವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆಗೆ ನೀಡುವ ಮೂಲಕ ನಗರಸಭೆ ಸದಸ್ಯ ನಿತಿನ್ ಕರ್ಪೂರ ಔದರ್ಯ ಮೆರೆದಿದ್ದಾರೆ.

ನಿತಿನ್ ಅವರು ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ತಮ್ಮ ಮಕ್ಕಳಾದ ಕೌಶಿಕ್ ಕರ್ಪೂರ ಹಾಗೂ ರಿತ್ವಿಕ್ ಕರ್ಪೂರ ಅವರ ಶಾಲು ಹೊದಿಸುವ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹರಿಸಿದ ಗಣ್ಯರು, ಬಂಧುಗಳು, ಸ್ನೇಹಿತರು, ಹಿತೈಷಿಗಳು ಮಕ್ಕಳಿಗೆ ಉಡುಗೊರೆ ಕೊಟ್ಟಿದ್ದರು.

ಉಡುಗೊರೆಯಾಗಿ ಬಂದ ಒಟ್ಟು ರೂ. 30 ಸಾವಿರವನ್ನು ನಿತಿನ್ ಅವರು ಗೋಶಾಲೆ ನಿರ್ವಹಣೆಗಾಗಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಅವರಿಗೆ ನೀಡಿದ್ದಾರೆ.

ಗೋ ಮಾತೆ ಸೇವೆ ಶ್ರೇಷ್ಠವಾದದ್ದು. ಹೀಗಾಗಿ ಉಡುಗೊರೆ ರೂಪದಲ್ಲಿ ಬಂದ ಹಣವನ್ನು ಗೋಶಾಲೆಗೆ ಕೊಡಲಾಗಿದೆ ಎಂದು ನಿತಿನ್ ಕರ್ಪೂರ ತಿಳಿಸಿದ್ದಾರೆ.

ನಿತಿನ್ ಕರ್ಪೂರ ಅವರು ಉಡುಗೊರೆ ರೂಪದಲ್ಲಿ ಬಂದ ಹಣವನ್ನು ಗೋಶಾಲೆಗೆ ಕೊಟ್ಟು ತಮ್ಮ ಮಕ್ಕಳ ಶಾಲು ಹೊದಿಸುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದ್ದಾರೆ. ಕೌಟುಂಬಿಕ ಕಾರ್ಯಕ್ರಮವನ್ನು ಸಾಮಾಜಿಕ ಚಟುವಟಿಕೆಯೊಂದಿಗೆ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದ್ದಾರೆ.
ದಾನಿಗಳ ನೆರವಿನಿಂದ ಐದು ವರ್ಷಗಳಿಂದ ಗೋ ಶಾಲೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರಲಾಗುತ್ತಿದೆ. ಗೋಶಾಲೆಯಲ್ಲಿ 100 ಗೋವುಗಳು ಇವೆ ಎಂದು ತಿಳಿಸಿದ್ದಾರೆ.