ಮೈಸೂರು: ಫೇಸ್‌ಬುಕ್ ಸ್ನೇಹಿತನೊಬ್ಬ ಉಡುಗೊರೆ ಕಳುಹಿಸುವ ನೆಪದಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿಯಿಂದ 15.34 ಲಕ್ಷ ರೂ.ಲಪಟಾಯಿಸಿದ್ದಾನೆ.
ವಿದ್ಯಾರಣ್ಯಪುರಂನಲ್ಲಿ ನೆಲೆಸಿರುವ ಮಹಿಳೆ ಹಣ ಕಳೆದುಕೊಂಡವರು. ಇವರಿಗೆ ಡಾ.ಕೃಷ್ಣ ಮೋಹನ್ ಹೆಸರಿನ ವ್ಯಕ್ತಿ ಫೇಸ್‌ಬುಕ್ ಪರಿಚಯವಾಗಿದ್ದಾನೆ. ಬಳಿಕ ಮಹಿಳೆಯ ವಾಟ್ಸ್‌ಆ್ಯಪ್ ನಂಬರ್ ಪಡೆದು ಚಾಟ್ ಮಾಡಲು ಶುರು ಮಾಡಿದ್ದಾನೆ. ಅಮೆರಿಕದ ಫ್ಲೋರಿಡಾದಲ್ಲಿ ನೆಲೆಸಿರುವುದಾಗಿ ತಿಳಿಸಿದ್ದಾನೆ.
ನಿಮಗೆ ಬೆಲೆಬಾಳುವ ಉಡುಗೊರೆ ಹಾಗೂ 2 ಕೋಟಿ ರೂ. ಕಳುಹಿಸುತ್ತಿರುವುದಾಗಿ ಆ ವ್ಯಕ್ತಿ ಫೆ.1ರಂದು ಸಂದೇಶ ಕಳುಹಿಸಿದ್ದಾನೆ. ಬಳಿಕ ಫೆ.3ರಂದು ಕರೆ ಮಾಡಿದ ಬೇರೊಬ್ಬ ವ್ಯಕ್ತಿ, ತಾನು ದೆಹಲಿ ವಿಮಾನ ನಿಲ್ದಾಣದಿಂದ ಕರೆ ಮಾಡುತ್ತಿದ್ದು, ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಬಂದಿದೆ. ಅದರಲ್ಲಿ ಬೆಲೆಬಾಳುವ ವಸ್ತುಗಳಿವೆ ಎಂದು ತಿಳಿಸಿದ್ದಾನೆ.
ಏರ್‌ಪೋರ್ಟ್ ಎಕ್ಸ್‌ಚೇಂಜ್ ಪ್ರಕ್ರಿಯೆ ನೆಪದಲ್ಲಿ ಪ್ಯಾನ್‌ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಇತರ ದಾಖಲಾತಿಯನ್ನು ವ್ಯಾಟ್ಸ್‌ಆ್ಯಪ್ ಮೂಲಕ ಪಡೆದಿದ್ದಾನೆ. ನಂತರ ತೆರಿಗೆ ಪಾವತಿಸಬೇಕೆಂದು ಸೂಚಿಸಿದ್ದಾನೆ. ಇದನ್ನು ನಂಬಿದ ಮಹಿಳೆ, ಆನ್‌ಲೈನ್ ಮೂಲಕ ವಿವಿಧ ಹಂತಗಳಲ್ಲಿ 15.34 ಲಕ್ಷ ರೂ. ವರ್ಗಾಯಿಸಿದ್ದಾರೆ.
ಬಳಿಕ ಮತ್ತಷ್ಟು ಹಣ ಕಳುಹಿಸಲು ತಿಳಿಸಿದ್ದಾನೆ. ಆಗ ಮಹಿಳಾ ಉದ್ಯೋಗಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.