ಹಾಸನ : ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರು ಅಭ್ಯರ್ಥಿಗಳಿಂದ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಬಾರದು. ಅಭ್ಯರ್ಥಿಗಳು ಕೂಡ ಮತದಾರರಿಗೆ ಉಡುಗೊರೆ ನೀಡದೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪಾರದರ್ಶಕ ಚುನಾವಣೆ ನಡೆಯಲು ಅನುವಾಗಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಮಂಜುನಾಥ್ ಹೇಳಿದರು.
ಚುನಾವಣೆ ವೇಳೆ ಅಭ್ಯರ್ಥಿಗಳು ಉಡುಗೊರೆ ನೀಡುತ್ತಿರುವ ಬಗ್ಗೆ, ಆಸೆ -ಆಮಿಷಗಳನ್ನು ತೋರುತ್ತಿರುವ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಇದುವರೆಗೂ ಜಿಲ್ಲೆಯಲ್ಲಿ 30ರಿಂದ 35 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಮತದಾರರಿಗೆ ಹಂಚಲು ಕುಕ್ಕರ್, ಚಿನ್ನದ ಆಭರಣ, ಸೀರೆ ಸೇರಿದಂತೆ ಇನ್ನಿತರೆ ವಸ್ತುಗಳನ್ನು ದಾಖಲೆಗಳಿಲ್ಲದೆ ಹಂಚುತ್ತಿದ್ದರೆ ಅಥವಾ ಸಾಗಣೆ ಮಾಡುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನಮ್ಮ ಇಲಾಖೆಯಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ಸಿ.ಶಿಖಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಉಡುಗೊರೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಅಪರಾಧವಾಗಿದೆ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮತಕ್ಕಾಗಿ ಉಡುಗೊರೆಗಳ ಆಸೆ ತೋರಿಸುತ್ತಾರೆ. ಇದರಿಂದ ನೈತಿಕ ಚುನಾವಣೆ ನಡೆಯುವುದಿಲ್ಲ. ಪ್ರತಿಯೊಬ್ಬ ಪ್ರಜೆಯೂ ಕೂಡ ತಮ್ಮ ಕಷ್ಟ -ದುಃಖಗಳಿಗೆ ಸ್ಪಂದಿಸುವ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ದಾಖಲೆಗಳಿಲ್ಲದ ವಸ್ತುಗಳನ್ನು ಹಂಚುತ್ತಿದ್ದರೆ ಮತ್ತು ಸಾಗಣೆ ಮಾಡುತ್ತಿದ್ದರೆ ಅವುಗಳನ್ನು ಪರಿಶೀಲಿಸಿ, ತಪ್ಪು ಕಂಡುಬಂದಲ್ಲಿ ದಂಡ ಹಾಕುವುದು ನಮ್ಮ ಕೆಲಸ. ನಂತರ ಮುಂದಿನ ಕ್ರಮಕ್ಕೆ ಪೊಲೀಸರಿಗೆ ಒಪ್ಪಿಸಲಾಗುವುದು. ಮುಂದೆ ಅವರು ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.