ಜಿಲ್ಲೆ

ಉಜ್ವಲ ಭವಿಷ್ಯಕ್ಕೆ ಗುಣಮಟ್ಟದ ಶಿಕ್ಷಣ ಪಡೆಯಿರಿ

Chikkaballapur

ಚಿಕ್ಕಬಳ್ಳಾಪುರ : ಉಜ್ವಲ ಭವಿಷ್ಯಕ್ಕಾಗಿ ಮಕ್ಕಳು ಕಷ್ಟದ ನಡುವೆಯೂ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದು ನಗರಸಭಾ ಅಧ್ಯಕ್ಷ ಆನಂದ್ ರೆಡ್ಡಿ ಬಾಬು ಕರೆ ನೀಡಿದರು.

ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಮಿತಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಲ್ಯಾಪ್ ಟಾಪ್, ಟ್ಯಾಬ್ ವಿತರಣೆ ಮಾಡಿ ಮಾತನಾಡಿದರು.

ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಬಾಗಿಲು ಮುಚ್ಚಿವೆ. ಇದರಿಂದ ಮಕ್ಕಳು ಶಿಕ್ಷಣ ಪಡೆಯಲು ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಆನ್‌ಲೈನ್ ಮೂಲಕ ಕಲಿಕೆಗೆ ಲ್ಯಾಪ್‌ಟಾಪ್, ಟ್ಯಾಬ್ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಮಿತಿಯು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಕೆರೆ ಅಭಿವೃದ್ಧಿ, ಸುಜ್ಞಾನ ನಿಧಿ ಶಿಷ್ಯವೇತನ, ಮದ್ಯ ವರ್ಜನ ಶಿಬಿರ, ಮಾಸಾಶನ, ದೇವಸ್ಥಾನಗಳಿಗೆ ವಿಶೇಷ ಅನುದಾನ, ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಆರ್ಥಿಕ ನೆರವು ಸೇರಿ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು ಇದರಿಂದ ಅನೇಕರಿಗೆ ಅನುಕೂಲವಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಮಿತಿ ಯೋಜನಾಧಿಕಾರಿ ಧನಂಜಯ್ ಮಾತನಾಡಿ, ಸಂಸ್ಥೆಯು ರಾಜ್ಯಾದ್ಯಂತ 20 ಸಾವಿರ ಟ್ಯಾಬ್ ಮತ್ತು 10 ಸಾವಿರ ಲ್ಯಾಪ್‌ಟಾಪ್ ವಿತರಿಸುತ್ತಿದ್ದು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 100 ಟ್ಯಾಬ್ ಮತ್ತು 50 ಲ್ಯಾಪ್‌ಟಾಪ್ ವಿತರಣೆ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಪತ್ರಕರ್ತ ಕೆ.ಎಸ್.ನಾರಾಯಣಸ್ವಾಮಿ, ವಿಶ್ವೇಶ್ವರಯ್ಯ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮಂಚನಬಲೆ ಎಂ.ರಾಮಕೃಷ್ಣರೆಡ್ಡಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಾ, ಮೇಲ್ವಿಚಾರಕಿ ಶ್ರೀನಿವಾಸ್ ಮತ್ತಿತರರು ಇದ್ದರು.