ಚಿಕ್ಕಬಳ್ಳಾಪುರ: ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಗುಣಮಟ್ಟದ ಶಿಕ್ಷಣದ ಪಾತ್ರ ಮಹತ್ತರವಾದುದು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಎಸ್‌ಜೆಸಿಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಬುಧವಾರ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಕಂಪ್ಯೂಟರ್ ಸೈನ್ಸ್ ವಿಭಾಗದ ಪಠ್ಯಕ್ರಮದ ನಿರೂಪಣೆ ಕುರಿತ ಒಂದು ದಿನದ ಕಾರ್ಯಾಗಾರದ ಸಾನಿಧ್ಯ ವಹಿಸಿ ಮಾತನಾಡಿ, ಶಿಕ್ಷಣವು ಗತ ಮತ್ತು ಭವಿಷ್ಯತ್ ಕಾಲದ ಅರಿವಿನೊಂದಿಗೆ ವರ್ತಮಾನದಲ್ಲಿ ಇತರರೊಂದಿಗೆ ಬದುಕುವ ಸಾಮರ್ಥ್ಯವನ್ನು ನೀಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾದ ಉತ್ತಮ ವ್ಯಕ್ತಿತ್ವವನ್ನು ರೂಪಿಸಬೇಕು ಎಂದರು.
ಎಲ್ಲರಲ್ಲೂ ಪ್ರತಿಭೆ ಮತ್ತು ಕೌಶಲ ಸ್ತುವಾಗಿರುತ್ತದೆ. ಇದು ನಿರಂತರ ಪರಿಶ್ರಮದಿಂದ ಹೊರ ಹುಮ್ಮುತ್ತದೆ. ಇದನ್ನರಿತುಕೊಂಡು ಜೀವನದ ಪ್ರಮುಖ ಗುರಿ ಸಾಧನೆಯತ್ತ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಭಾರತೀಯರ ಕೌಶಲ, ಸಾಮರ್ಥ್ಯ ಮತ್ತು ಬೆಳವಣಿಗೆಯು ವಿಶಿಷ್ಟವಾದುದು. ಈಗಾಗಲೇ ಅನೇಕರು ಹೊಸ ಚಿಂತನೆಗಳೊಂದಿಗೆ ವಿಶಿಷ್ಟ ಸಾಧನೆಯ ಮೂಲಕ ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಇಂತಹವರನ್ನು ಯುವ ಜನತೆ ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು.
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಉಪ ಕುಲಪತಿ ಕರಿಸಿದ್ದಪ್ಪ ಮಾತನಾಡಿ, ಹೊಸ ಶಿಕ್ಷಣ ನೀತಿಯು ಕಾಲಕ್ಕೆ ಅನುಗುಣವಾಗಿ ನಿರಂತರ ಸಂಶೋಧನೆ, ಅಧ್ಯಯನ ಮತ್ತು ಕೌಶಲ ವೃದ್ಧಿಗೆ ಸಹಕಾರಿಯಾಗಿದೆ ಎಂದರು. ಸಮಾಜದಲ್ಲಿ ಸಮರ್ಥರನ್ನು ವಿಪುಲ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆದರೆ, ಇದನ್ನು ನಿರಂತರವಾಗಿ ನಿರೀಕ್ಷಿಸಲು ಸಾಧ್ಯವಿಲ್ಲ. ಇದಕ್ಕೆ ಸಕಾಲದಲ್ಲಿ ಅವಕಾಶಗಳನ್ನು ತನ್ನದಾಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ತ್ವರಿತ ವಿಷಯ ಗ್ರಹಿಕೆ, ಪರಿಸ್ಥಿತಿಗೆ ಹೊಂದಾಣಿಕೆ ಮತ್ತು ಉತ್ತಮ ನಿರ್ವಹಣೆಯ ಕೌಶಲ ಗಳಿಕೆ ಅಗತ್ಯ ಎಂದರು.
ಸಮಗ್ರ ಶಿಕ್ಷಣವು ಅಂಕಪಟ್ಟಿಗೆ ಮಾತ್ರ ಸೀಮಿತವಾಗಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಮಾನವೀಯ ಮೌಲ್ಯ, ನಿರಂತರ ಪರಿಶ್ರಮ ಮತ್ತು ಶ್ರದ್ಧೆ, ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಬೇಕು. ಸದಾ ಸಾಧನೆಯ ತುಡಿತವನ್ನು ಹೊಂದಿರಬೇಕು. ಇಂತಹ ಗುಣಗಳನ್ನು ಪರಿಣಾಮಕಾರಿ ಕಲಿಕೆಯ ಶಿಕ್ಷಣದಿಂದ ನಿರೀಕ್ಷಿಸಲು ಸಾಧ್ಯ ಎಂದರು.ರಾಷ್ಟ್ರೀಯ ಶಿಕ್ಷಣ ನೀತಿಯ ಕಂಪ್ಯೂಟರ್‌ಸೈನ್ಸ್ ವಿಭಾಗದ ಪಠ್ಯಕ್ರಮದ ನಿರೂಪಣೆ, ಉನ್ನತ ಶಿಕ್ಷಣದಲ್ಲಿ ಅಧ್ಯಾಪಕರ ಮಹತ್ವ ಹಾಗೂ ಶಿಕ್ಷಣ ನೀತಿಯಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಅನುಮೋದನೆಯ ಕುರಿತು ಉಪನ್ಯಾಸ ನೀಡಲಾಯಿತು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಬಿಜಿಎಸ್ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಸಚಿವ ಆನಂದ ದೇಶಪಾಂಡೆ, ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಂಡಳಿಯ ಅಧ್ಯಕ್ಷ ಕೆ.ಎಸ್.ಶ್ರೀಧರ್, ಎಸ್‌ಜೆಸಿ ಪ್ರಾಂಶುಪಾಲ ಜಿ.ಟಿ.ರಾಜು ಮತ್ತಿತರರು ಇದ್ದರು.