ದಾವಣಗೆರೆ: ಬಿಜೆಪಿ ಶಿಸ್ತು ಸಮಿತಿ ಸೂಚನೆ ಮೇರೆಗೆ ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಹಾಗೂ ಅವರ ಪುತ್ರರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದು ಏಕಪಕ್ಷೀಯ ತೀರ್ಮಾನ ಅಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಸ್ಪಷ್ಟಪಡಿಸಿದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗುರುಸಿದ್ದನಗೌಡ ಹಾಗೂ ಅವರ ಪುತ್ರರು ಜಗಳೂರು ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಚಾರ ನಡೆಸಿ ಪಕ್ಷದ ಸೋಲಿಗೆ ಕಾರಣರಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರೇಣುಕಾಚಾರ್ಯ ನೀಡಿದ ಹೇಳಿಕೆಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು. ಪಕ್ಷ ವಿರೋಧಿ ಚಟುವಟಿಕೆಯಿಂದ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದು ಈ ಕುರಿತು ಸಾಕ್ಷಿ ಸಹಿತ ಪಕ್ಷದ ರಾಜ್ಯ ಸಮಿತಿಗೆ ದೂರು ನೀಡಿದ್ದರು. ಈ ಬಗ್ಗೆ 15 ಜನರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ಕೈಗೊಂಡು ಜುಲೈನಲ್ಲಿ ವರದಿ ಸಲ್ಲಿಸಲಾಗಿತ್ತು ಎಂದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರೂ ಅವರಿಗೆ ಅನ್ಯಾಯವಾಗಿದೆ. ಇದರಿಂದಾಗಿ ಪಕ್ಷ ಈ ಸ್ಥಿತಿಗೆ ಬಂದಿದೆ ಎಂದು ಹೇಳುವ ರೇಣುಕಾಚಾರ್ಯರು ಬಿಎಸ್‌ವೈ ರಾಜೀನಾಮೆ ನೀಡುವಾಗ ಏಕೆ ಪ್ರತಿಭಟಿಸಲಿಲ್ಲ. ಅವರಿಗಿಲ್ಲದ ಅಧಿಕಾರ ನನಗೂ ಬೇಡ ಎಂದೇಕೆ ರಾಜೀನಾಮೆ ನೀಡಲಿಲ್ಲ. ಹಿಂದೆ ಯಾವ ಪುರುಷಾರ್ಥಕ್ಕೆ ರೆಸಾರ್ಟ್‌ಗೆ ಹೋಗಿ ಅವರ ಕಣ್ಣಲ್ಲಿ ನೀರು ತರಿಸಿದ್ದರು ಎಂದು ಪ್ರಶ್ನಿಸಿದರು. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರು ಅಧಿಕಾರದ ದುರಾಸೆಗೆ ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಹಾಗೂ ಕೆ.ಎಸ್.ಈಶ್ವರಪ್ಪ ವಿರುದ್ಧ ನಿರಂತರ ವಾಗ್ದಾಳಿ ಮಾಡುತ್ತಿದ್ದ ರೇಣುಕಾಚಾರ್ಯರಿಗೆ ಈಗ ಎಲ್ಲರ ಮೇಲೂ ಪ್ರೀತಿ ಹಾಗೂ ಸಹಾನುಭೂತಿ ಮೂಡಿದೆ ಎಂದರು. ಪಕ್ಷದ ಅತ್ಯಂತ ಹಿರಿಯರಾದ ಎಸ್.ಎ.ರವೀಂದ್ರನಾಥ್ ಅವರು ಕೊನೆಯ ಬಾರಿ ಮಂತ್ರಿ ಆಗಲಿ ಎಂದು ರೇಣುಕಾಚಾರ್ಯರು ಹೇಳಬಹುದಿತ್ತು. ಆದರೆ ಸಚಿವ ಸ್ಥಾನದ ಆಸೆಯಿಂದ ಇದನ್ನು ಮಾಡದೆ ಜಿಲ್ಲೆಗೆ ಮಂತ್ರಿ ಸ್ಥಾನ ತಪ್ಪಲು ಪ್ರಮುಖ ಕಾರಣರಾಗಿದ್ದಾರೆ. ಹೊನ್ನಾಳಿ ತಾಲೂಕಿನಲ್ಲೂ ಹಲವಾರು ನಾಯಕರು ಪಕ್ಷ ಬಿಡಲು ಕಾರಣರಾಗಿದ್ದಾರೆ ಎಂದು ದೂರಿದರು. ತೇಜೋವಧೆ ಸಹಿಸುವುದಿಲ್ಲ ರೇಣುಕಾಚಾರ್ಯರ ದ್ವಂದ್ವ ನಿಲುವಿನಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದ್ದು ತಕ್ಷಣ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಪಕ್ಷದ ಬಗ್ಗೆ ನಿಜವಾದ ಕಾಳಜಿ ಇದ್ದರೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಬಳಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಬೇಕು. ನಿಮ್ಮ ನಡೆ ಪಕ್ಷಕ್ಕೆ ಕಪ್ಪುಚುಕ್ಕೆಯಾಗಿದ್ದು, ಬಾಯಿಚಟಕ್ಕೆ ಪಕ್ಷದ ತೇಜೋವಧೆ ಮಾಡಿದರೆ ಸಹಿಸುವುದಿಲ್ಲ ಎಂದು ಹೇಳಿದರು. ಬಿಜೆಪಿ ರಾಜ್ಯ ಘಟಕ ಈಗಾಗಲೇ ರೇಣುಕಾಚಾರ್ಯ ಅವರಿಗೆ ನೋಟಿಸ್ ನೀಡಿದೆ. ರೇಣುಕಾಚಾರ್ಯ ಅವರ ನಡೆ ಪಕ್ಷದ ಸಂವಿಧಾನಕ್ಕೆ ವಿರುದ್ಧವಾಗಿದ್ದು ಇತ್ತೀಚಿನ ಬೆಳವಣಿಗೆಗಳ ಕುರಿತು ಶೀಘ್ರ ಕೋರ್ ಕಮಿಟಿ ಸಭೆ ಕರೆದು ಪಕ್ಷಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಂಜಾನಾಯ್ಕ, ಮಹೇಶ್ ಪಲ್ಲಾಗಟ್ಟೆ, ಶಾಂತರಾಜ್ ಪಾಟೀಲ್, ಗಂಗಾಧರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು. ----
ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರು ನನ್ನನ್ನು ಸೋಲಿಸಲಿಲ್ಲ. ನಾಯಕರೇ ಸೋಲಿಸಿದರು. ಪಕ್ಷ ವಿರೋಧಿ ಚಟುವಟಿಕೆ ಕುರಿತು ಹೈಕಮಾಂಡ್‌ಗೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಗುರುಸಿದ್ದನಗೌಡ ಹಾಗೂ ಅವರ ಪುತ್ರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಸಂಸದ ಸಿದ್ದೇಶ್ವರ ಹಾಗೂ ಈ ವಿಚಾರಕ್ಕೆ ಯಾವುದೇ ಸಂಬಂಧವಿಲ್ಲ. -ಎಸ್.ವಿ.ರಾಮಚಂದ್ರ, ಮಾಜಿ ಶಾಸಕ.
----