ಚಿತ್ರದುರ್ಗ: ನಗರದೇವತೆ, ಅಸಂಖ್ಯಾತ ಭಕ್ತರ ಆರಾಧ್ಯ ದೈವ ಉಚ್ಚಂಗಿಯಲ್ಲಮ್ಮ ದೇವಿಯ ಉತ್ಸವ ಮೂರ್ತಿಯನ್ನು ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನಗರಕ್ಕೆ ಭಕ್ತರು ಕರೆತಂದರು.
ದುರ್ಗದ ಪಾಳೆಗಾರರ ಕುಲದೇವತೆಯಾದ ರಾಜಮಾತೆಯ ದೇಗುಲದಿಂದ ಉತ್ಸವ ಮೂರ್ತಿಯನ್ನು ಹೊತ್ತ ಅರ್ಚಕರು ಮಡಿ ಹಾಸಿನ ಮೇಲೆ ಕರೆತರುವಾಗ ಮಂಗಳವಾದ್ಯ ಘೋಷ ಮೊಳಗಿತು.
ಜಾತ್ರಾ ಮಹೋತ್ಸವದ ಪದ್ಧತಿಯಂತೆ ಅಶ್ವವಾಹನರೂಢ ಉತ್ಸವ ಮೂರ್ತಿಯನ್ನು ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇಗುಲದಿಂದ ಕೆಳಗಿಳಿಯುವ ವೇಳೆ ಉಧೋ ಉಧೋ ಎಂಬ ಹರ್ಷೋದ್ಗಾರ ಮುಗಿಲುಮುಟ್ಟಿತು.
ಕನಕಾಂಬರ, ಮಲ್ಲಿಗೆ, ವಿವಿಧ ವರ್ಣದ ಸೇವಂತಿ, ಸುಗಂಧರಾಜ, ದುಂಡು ಮೊಗ್ಗು ಸೇರಿ ಹಲವು ಬಗೆಯ ಪುಷ್ಪ, ಬೃಹತ್ ಹೂವಿನ ಹಾರದಿಂದ ಅಲಂಕರಿಸಿದ್ದ ಮೂರ್ತಿ ಕಂಗೊಳಿಸಿತು. ಕಹಳೆ, ನಗಾರಿ, ಉರುಮೆ, ಡೊಳ್ಳು, ತಮಟೆ ಸೇರಿ ಜನಪದ ಕಲಾತಂಡಗಳು ಮೆರುಗು ನೀಡಿದವು.
ಬುಡಕಟ್ಟು ಸಂಸ್ಕೃತಿಯುಳ್ಳ ಕೋಟೆನಾಡಲ್ಲಿ ಶಕ್ತಿದೇವತೆಗಳನ್ನು ಆರಾಧಿಸುವವರ ಸಂಖ್ಯೆ ಅಧಿಕ. ಅಲ್ಲದೆ, ಭಕ್ತರ ಮನೆಗಳೇ ತವರು ಮನೆ ಎಂಬ ನಂಬಿಕೆ ಇಲ್ಲಿ ಬೇರೂರಿದೆ. ಹೀಗಾಗಿ ನಗರಕ್ಕೆ ದೇವಿಯನ್ನು ಕರೆತರಲು ಬೆಳಗ್ಗೆ 6ರಿಂದಲೇ ನೂರಾರು ಮಂದಿ ದೇಗುಲದ ಬಳಿ ಜಮಾಯಿಸಿದ್ದರು.
ಪೂಜಾ ವಿಧಿವಿಧಾನ ಪೂರ್ಣಗೊಳ್ಳುವ ಸಮಯಕ್ಕಾಗಿ ಕಾಯುತ್ತಲೇ ಕುಳಿತಿದ್ದರು. ನಂತರ ಪುರಪ್ರವೇಶಿಸಿದ್ದೆ ತಡ ಉತ್ಸವ ಇನ್ನಷ್ಟು ಕಳೆಗಟ್ಟಿತು. ಸಂಚರಿಸಿದ ಮಾರ್ಗದ ಕಡೆಯಲೆಲ್ಲಾ ನೀರೆರಚಿ, ರಂಗೋಲಿ ಬಿಡಿಸಿ, ಮಾವಿನ ತೋರಣ ಕಟ್ಟಿ, ಅದ್ದೂರಿಯಾಗಿ ಸ್ವಾಗತಿಸಿ ಭಕ್ತಿಯಲ್ಲಿ ಮಿಂದೆದ್ದರು.
ದೇಗುಲದಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಬಿಲ್ವಾರ್ಚನೆ ಸೇರಿ ಇತರೆ ಪೂಜಾ ಕೈಂಕರ್ಯವನ್ನು ಅರ್ಚಕರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಕೋಟೆ ಮಾರ್ಗ, ಚಿಕ್ಕಪೇಟೆ, ಬುರುಜನಹಟ್ಟಿ, ಸಿಹಿನೀರು ಹೊಂಡದ ಬಾಗಿಲು, ಬರಗೇರಮ್ಮ ದೇವಿಯ ಪಾದದ ಗುಡಿ, ಆನೆ ಬಾಗಿಲು, ದೊಡ್ಡಪೇಟೆ, ಕರುವಿನಕಟ್ಟೆ ವೃತ್ತ ಸೇರಿ ಹಲವೆಡೆ ಸಂಚರಿಸಿತು.
ಮಾಳಪ್ಪನಹಟ್ಟಿಯಲ್ಲಿ ಪೂಜೆ: ನಗರದ ಭಕ್ತರಿಂದ ಪೂಜೆ ಸ್ವೀಕರಿಸಿದ ನಂತರ ದೇವಿಯ ಉತ್ಸವ ಮೂರ್ತಿಯನ್ನು ಮಾಳಪ್ಪನಹಟ್ಟಿ ಗ್ರಾಮಕ್ಕೆ ಕರೆತರಲಾಯಿತು. ಗ್ರಾಮಸ್ಥರು ಕೂಡ ಅದ್ದೂರಿಯಾಗಿ ಸ್ವಾಗತಿಸಿದರು. ಭಕ್ತಿಪೂರ್ವಕವಾಗಿ ಮೀಸಲು ಸಮರ್ಪಿಸಿದರು.
ಅನೇಕ ಭಕ್ತರ ಮನೆಗಳ ಮುಂಭಾಗ ಮಹಾಮಂಗಳಾರತಿ ಪೂಜೆ ನೆರವೇರಿದ ಬಳಿಕ ಪಾನಕ, ಕೋಸುಂಬರಿ, ಮಜ್ಜಿಗೆ, ಪಾಯಸ, ಪುಳಿಯೊಗರೆ, ಚಿತ್ರಾನ್ನ, ಪಲಾವ್, ಮೊಸರನ್ನ, ಕಡಲೆಕಾಳು ಹುಸುಳಿ ಸೇರಿ ಇತರೆ ಪ್ರಸಾದ ವಿತರಿಸುವ ಮೂಲಕ ಭಕ್ತಿ ಸಮರ್ಪಿಸಲಾಯಿತು.