ಚಿತ್ರದುರ್ಗ: ಉಚಿತ ಯೋಜನೆಗಳು ದೇಶ ಮತ್ತು ರಾಜ್ಯಕ್ಕೆ ಶೋಭೆ ತರುವಂತದಲ್ಲ. ಅಧಿಕಾರದ ಲಾಲಸೆಗಾಗಿ ಆರ್ಥಿಕ ಸ್ಥಿತಿ ಹದಗೆಡಿಸುವ ಪ್ರಯತ್ನ ಒಳ್ಳೆಯ ಬೆಳವಣಿಗೆಯಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಕಿಡಿಕಾರಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಡವರು ಮತ ಹಾಕಿಲ್ಲ. ಗ್ಯಾರಂಟಿ ನಂಬಿಕೊಂಡು ಚಲಾಯಿಸಿದ್ದಾರೆ. ಅವರ‌್ಯಾರಿಗೂ ಕಂಪ್ಯೂಟರ್, ಸರ್ವರ್ ಕುರಿತು ಮಾಹಿತಿ ಇಲ್ಲ. ಕೋಟ್ಯಂತರ ಮಂದಿ 5 ಗ್ಯಾರಂಟಿಗಾಗಿ ಕನಸು ಕಾಣುತ್ತಿದ್ದು, ನನಸಾಗಿಸಿ ಎಂದು ಒತ್ತಾಯಿಸಿದರು.
ಗೃಹಜ್ಯೋತಿ ಯೋಜನೆಯಡಿ ಜನರಿಗೆ ಇನ್ನೂ ಗೊಂದಲಗಳಿವೆ. ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವುದು ಕನಸಾಗೇ ಉಳಿದಿದೆ. ಖುರ್ಚಿ ಬಗ್ಗೆ ಚರ್ಚೆ ಮಾಡೋದನ್ನ ಬಿಟ್ಟು ಗ್ಯಾರಂಟಿ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ. ಇಲ್ಲದಿದ್ದರೆ, ಆದಷ್ಟು ಬೇಗ ರಾಜ್ಯದ ಜನ ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಸಿದರು.
ಬಸ್‌ಗಳಲ್ಲಿ ನಿಗದಿಗಿಂತಲೂ ಶಕ್ತಿ ಯೋಜನೆಯಡಿ ಪ್ರಯಾಣಿಸುವವರ ಸಂಖ್ಯೆ ದ್ವಿಗುಣವಾಗಿದೆ. 90ಕ್ಕೂ ಹೆಚ್ಚು ಪ್ರಯಾಣಿಕರು ಒಂದೊಂದು ಬಸ್‌ನಲ್ಲಿ ಪುಣ್ಯಕ್ಷೇತ್ರ ಸುತ್ತಾಡುತ್ತಿದ್ದಾರೆ. ಆದರೆ, ಚಾಲಕರು, ನಿರ್ವಾಹಕರು ಸೇರಿ ಯಾರಿಗೂ ಭದ್ರತೆ ಇಲ್ಲವಾಗಿದೆ. ಈಗಾಗಲೇ ಯುವತಿಯೊಬ್ಬಳು ಮೃತಪಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ಆಕ್ರೋಶ ಹೊರಹಾಕಿದರು.
ಅಕ್ಕಿ ವಿತರಣೆಯಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿಲ್ಲ. ರಾಷ್ಟ್ರದಲ್ಲಿ 140 ಕೋಟಿ ಜನಸಂಖ್ಯೆ ಇದ್ದು, ಪ್ರಜೆಗಳ ಹಿತರಕ್ಷಣೆಗೆ ಆದ್ಯತೆ ನೀಡಬೇಕಿದೆ. ಹೀಗಾಗಿ ಎಲ್ಲ ರಾಜ್ಯಗಳ ಅರ್ಹ ಫಲಾನುಭವಿಗೆ ಆಹಾರ ಭದ್ರತಾ ಯೋಜನೆಯಡಿ 5 ಕೆ.ಜಿ ಅಕ್ಕಿ ನೀಡುತ್ತಿದೆ. ಇದನ್ನು ಹೊರತುಪಡಿಸಿ ರಾಜ್ಯದಲ್ಲಿ 10 ಕೆ.ಜಿ ನೀಡುವುದಾಗಿ ಘೋಷಿಸಿರುವ ಸಿಎಂ ಸಿದ್ದರಾಮಯ್ಯ ಅವರೇ ಪೂರೈಸಬೇಕು ಎಂದು ಆಗ್ರಹಿಸಿದರು.
ಎಫ್‌ಸಿಐಗೆ ತನ್ನದೇ ಆದ ಮಾನದಂಡಗಳಿದ್ದು, ರಾಜ್ಯಗಳು ಕೇಳಿದಂತೆ ಪುಕ್ಕಟೆ ಪಡಿತರ ಕೊಡೋದಕ್ಕೆ ಕೇಂದ್ರ ಸರ್ಕಾರದಿಂದ ಸಾಧ್ಯವಿಲ್ಲ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಎಲ್ಲಿಂದಲಾದರೂ ತಂದುಕೊಳ್ಳಲಿ, ತಲಾ ಒಬ್ಬರಿಗೆ 10 ಕೆ.ಜಿಯಂತೆ ಅಕ್ಕಿ ಪೂರೈಸಲಿ. ಬಿಜೆಪಿ ಸರ್ಕಾರ ಏನಾದರೂ ಉಚಿತ ಯೋಜನೆ ನೀಡ್ತೀವಿ ಎಂದು ಹೇಳಿತ್ತೆ ಎಂದು ಪ್ರಶ್ನಿಸಿದರು.
ರಾಜಕೀಯದ ಕುರಿತು ಹೆಚ್ಚಾಗಿ ತಿಳಿಯಬೇಕಾದ ಅಗತ್ಯವಿದ್ದು, ಮಾತನಾಡುವ ಮುನ್ನ ಹಿರಿಯರ ಮಾರ್ಗದರ್ಶನ ಪಡೆಯುವುದು ಉತ್ತಮ ಎಂದು ಬಿಜೆಪಿಯನ್ನು ಬ್ರಿಟಿಷ್ ಜನತಾ ಪಾರ್ಟಿ ಎಂಬ ಮಧು ಬಂಗಾರಪ್ಪ ಹೇಳಿಕೆಯನ್ನು ಖಂಡಿಸಿ ಸಚಿವರು, ಅಸಂಸ್ಕೃತ ಮಾತು ಮುಂದುವರಿಸಿದಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ನೀವು ಮುಳುಗುತ್ತೀರಿ ಎಂದು ಎಚ್ಚರಿಸಿದರು.
ಸಂಪತ್ತು ಹಂಚಿಕೆ ಅಗತ್ಯವಿದೆ
ದೇಶದೊಳಗೆ ಸರ್ವರೂ ಸಮಾನರಾಗಿ ಬಾಳ್ವೆ ಮಾಡಲು ಸಂಪತ್ತು ಸಮನಾಗಿ ಹಂಚಿಕೆಯಾಗಬೇಕಾದ ಅಗತ್ಯವಿದೆ. ಹಿರಿಯರು ಹೇಳಿದ ಈ ಮಾತು ಇಂದಿಗೂ ಸಾಧ್ಯವಾಗಿಲ್ಲ. ಸ್ವಾತಂತ್ರೃ ಬಂದು 75 ವರ್ಷವಾದರೂ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ ಎಂದು ವಿಷಾದಿಸಿದ ಸಚಿವ ನಾರಾಯಣಸ್ವಾಮಿ, ದೇಶ ಕಟ್ಟುವಲ್ಲಿ ಬಿಜೆಪಿ ಕಾರ್ಯಕರ್ತನಾಗಿ ಸದಾ ದುಡಿಯಲು ಸಿದ್ಧ ಎಂದರು.