ಜಿಲ್ಲೆ

ಉಚಿತ ಯೋಗ ಧ್ಯಾನ ಪ್ರಾಣಾಯಾಮ ಶಿಬಿರಕ್ಕೆ ಪೂಜ್ಯ ಸ್ವಾಮಿ ಪರಮಾರ್ಥ ದೇವ್ ಜೀ ಚಾಲನೆ

ಹಾಸನ: ನಗರದ ಚನ್ನಪಟ್ಟಣದ ಗೋಮತಿ ಕಲ್ಯಾಣ ಮಂಟಪದಲ್ಲಿ ಪತಂಜಲಿ ಯೋಗ ಪರಿವಾರ ವತಿಯಿಂದ ಸೋಮವಾರದಿಂದ ಮೇ 7ರ ವರೆಗೂ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಉಚಿತ ಯೋಗ ಧ್ಯಾನ ಪ್ರಾಣಾಯಾಮ ಶಿಬಿರಕ್ಕೆ ಪೂಜ್ಯ ಸ್ವಾಮಿ ಪರಮಾರ್ಥ ದೇವ್ ಜೀ ಚಾಲನೆ ನೀಡಿದರು.

ಮೂರು ದಿನಗಳ ತರಬೇತಿಯಲ್ಲಿ ಹಾಸನ, ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಸಂಖ್ಯೆಯಲ್ಲಿ ಯೋಗಪಟುಗಳು ವಿವಿಧ ಯೋಗಾಸನಗಳಲ್ಲಿ ಭಾಗವಿಸಿದ್ದರು. ಸೋಮವಾರ ಬೆಳಗ್ಗೆ 5.30ಕ್ಕೆ ಪ್ರಾರಂಭವಾದ ಯೋಗ 7.30ರವರೆಗೂ ನಿರಂತರವಾಗಿ ನಡೆಯಿತು.

ಈ ವೇಳೆ ಮಾತನಾಡಿದ ಹರಿದ್ವಾರ ಪತಂಜಲಿ ಯೋಗ ಪೀಠದ ಮುಖ್ಯ ಕೇಂದ್ರೀಯ ಪ್ರಭಾರಿ ಸ್ವಾಮಿ ಪರಮಾರ್ಥ ದೇವ್ ಜೀ, ಎಲ್ಲ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಯೋಗ ಪರಿಹಾರ ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗವನು ಮೈಗೂಡಿಸಿಕೊಳ್ಬೇಕು. ದೇಶಾದ್ಯಂತ ಯೋಗವನ್ನು ಪಸರಿಸುವ ನಿಟ್ಟಿನಲ್ಲಿ ವಿವಿಧ ಯೋಗ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದೆ ರೀತಿ ಹಾಸನದಲ್ಲಿ ಕೂಡ ಮೂರು ದಿನಗಳ ಕಾಲ ಉಚಿತ ಯೋಗ ಶಿಬಿರ ಆಯೋಜಿಸಿದ್ದು ಯೋಗದ ಮಹತ್ವ ಹಾಗೂ ಆಯುರ್ವೇದದ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪ್ರತಿ ಮನೆಯಲ್ಲಿ ಯೋಗ ಪಟುಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಹಾಗೂ ಇಂಗ್ಲಿಷ್ ಔಷಧ ಬದಲಾಗಿ ಆಯುರ್ವೇದ ಔಷಧ ಬಗೆಗಿನ ಮಹತ್ವ ತಿಳಿಸಿ ಅವರಿಗೆ ಯೋಗಕ್ಕೆ ಉತ್ತೇಜನ ನೀಡಲು ಮುಂದಾಗಿದ್ದೇವೆ. ಸಮಸ್ಯೆಗಳು ಅನೇಕ ಸಮಾಧಾನ ಒಂದೇ ಏಕ. ಯೋಗ ಉಚಿತ ಆರೋಗ್ಯ ಖಚಿತ, ಯೋಗ ಮಾಡಿ ನಿರೋಗಿಯಾಗಿರಿ ಎಂಬ ಧ್ಯೇಯ ವಾಕ್ಯಗಳೊಂದಿಗೆ ನಡೆಯುತ್ತಿರುವ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪತಂಜಲಿ ಯೋಗ ಕರ್ನಾಟಕ ರಾಜ್ಯ ಪ್ರಭಾರಿ ಭವರ ಲಾಲ್ ಜಿ ಆರ್ಯ ಮಾತನಾಡಿ, ಸ್ವಾಮಿ ಪರಮಾರ್ಥ ದೇವ್ ಗೂರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪ್ರತಿ ವಾರ್ಡ್‌ನಲ್ಲಿ ಒಂದೊಂದು ಯೋಗ ಕೇಂದ್ರ ಸ್ಥಾಪನೆ ಆಗಬೇಕು. ಮನೆ ಮನೆಯಲ್ಲೂ ರೋಗಿಗಳಿದ್ದು, ಪ್ರತಿ ಮನೆಗೆ ಯೋಗಿಗಳಾದರೇ, ಯೋಗ ಗುರು, ಯೋಗ ಶಿಕ್ಷಕ ಆದರೆ ಆ ಕುಟುಂಬ ನಿರೋಗಿ ಆಗುವುದಕ್ಕೆ ಸಾಧ್ಯವಾಗುತ್ತದೆ. ಯೋಗದಿಂದ ಕಾಯಿಲೆ ದೂರ ಮಾಡಿ, ಲಕ್ಷಾಂತರ ರೂಪಾಯಿ ವೈದ್ಯಕೀಯ ವೆಚ್ಚ ಉಳಿಸಬಹುದು. ಮೂರು ದಿನದ ಶಿಬಿರದ ನಂತರ ಯೋಗ ಶಿಕ್ಷಕರ ತರಬೇತಿ ಪ್ರಾರಂಭ ಮಾಡಲಾಗುತ್ತದೆ ಎಂದರು.

ಶಿಬಿರದಲ್ಲಿ ಪತಂಜಲಿ ಯೋಗ ಪರಿವಾರದ ನಿಕಟ ಪೂರ್ವ ಜಿಲ್ಲಾ ಸಂರಕ್ಷಕ ಹರಿಹರಪುರ ಶ್ರೀಧರ್, ಜಿಲ್ಲಾ ಸಂರಕ್ಷಕ ಲೋಕನಾಥ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಗಿರೀಶ್, ಸುರೇಶ್ ಪ್ರಜಾಪತಿ, ನಾಗೇಶ್, ಶಾರದಾ ಧರ್ಮಾನಂದ್, ಗೋಮತಿ ಕಲ್ಯಾಣ ಮಂಟಪದ ಮಾಲೀಕ ದಿನೇಶ್, ನಗರಸಭೆ ಮಾಜಿ ಸದಸ್ಯ ಎಚ್.ಎಂ. ಸುರೇಶ್ ಕುಮಾರ್ ಇದ್ದರು.