ಜಿಲ್ಲೆ

ಉಚಿತ ಭಾಗ್ಯಗಳನ್ನು ಸರ್ಕಾರ ಕೂಡಲೇ ಸ್ಥಗಿತಗೊಳಿಸಬೇಕು: ಕೆ. ಎಂ. ಶಿವಲಿಂಗೇಗೌಡ

ಅರಸೀಕೆರೆ : ಆರೋಗ್ಯಕರ ದೇಶ ನಿರ್ಮಾಣಕ್ಕೆ ದುಡಿಯುವ ಕೈಗಳಿಗೆ ಕೆಲಸ ನೀಡುವುದರ ಜತೆಗೆ ಉಚಿತ ಭಾಗ್ಯಗಳನ್ನು ಸರ್ಕಾರ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಕರೆ ನೀಡುವ ಮೂಲಕ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಡಳಿತ ಪಕ್ಷಕ್ಕೆ ಚಾಟಿ ಬೀಸಿದರು.

ನಗರದ ಕಸ್ತೂರ ಬಾ ಸೇವಾಶ್ರಮದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಮಹತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮನ್ನಾಳುವ ಸರ್ಕಾರಗಳು ಮನ ಬಂದಂತೆ ಉಚಿತ ಭಾಗ್ಯಗಳನ್ನು ನೀಡುತ್ತಿರುವ ಪರಿಣಾಮ ದುಡಿಯವ ವರ್ಗದವರ ಸಂಖ್ಯೆ ಕ್ಷೀಣಿಸುತ್ತಿದೆ. ಇಂತಹ ಧೋರಣೆಯಿಂದ ಹೊರ ಬಂದು ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ತೇಜನ ನೀಡುವತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಲೋಚನೆ ನಡೆಸಬೇಕಿದೆ. ಮದ್ಯ ಮಾರಾಟದ ಆದಾಯದಿಂದ ದೇಶ ಮುನ್ನಡೆಸುತ್ತೇವೆ ಎಂಬ ಭ್ರಮೆಯಿಂದ ಹೊರಬರಬೇಕು. ಆರೋಗ್ಯಕರ ಸಮಾಜದ ನಿರ್ಮಾಣ ಮಾಡಬೇಕಾದಲ್ಲಿ ಮೊದಲು ಮದ್ಯಪಾನ ನಿಷೇಧ ಅಗತ್ಯವಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ದೇಶದ ಭವಿಷ್ಯಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿವಿಟಿ ಬಸವರಾಜು ಮಾತನಾಡಿ, ದೇಶದ ದಾಸ್ಯ ವಿಮೋಚನೆಗೆ ಮಹಾತ್ಮಾ ಗಾಂಧಿ ಸಂಘಟಿತ ಹೋರಾಟ ನಡೆಸಿದರೆ, ಪ್ರಧಾನಿಯಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಸೈನಿಕ ಹಾಗೂ ಅನ್ನದಾತನ ಬಗೆಗೆ ವಿಶೇಷ ಕಾಳಜಿ ವಹಿಸಿದ್ದರು ಎಂದರು.

ನಗರಸಭೆ ಸದಸ್ಯ ಸಿ.ಗಿರೀಶ್ ಮಾತನಾಡಿ, ಉಭಯ ಮಹನೀಯರ ಜಯಂತಿ ಆಚರಿಸಿದರೆ ಸಲದು.ಅವರ ತತ್ವ, ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಗೌರವ ನೀಡೋಣ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್, ತಹಸೀಲ್ದಾರ್ ವಿಭಾ ವಿ ರಾಥೋಡ್, ಆರ್.ಅನಂತಕುಮಾರ್, ಆಶ್ರಮದ ಉಸ್ತುವಾರಿ ಉಷಾ ಅಬ್ರಾಲ್ ಸೇರಿ ಹಲವರು ಮಾತನಾಡಿದರು.

ಇದಕ್ಕೂ ಮುನ್ನ ಗಾಂಧಿ ಚಿತಾ ಭಸ್ಮಕ್ಕೆ ಗಣ್ಯರು ಗೌರವ ಸಲ್ಲಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ರೈತ ಸಂಘದ ಮುಖಂಡರ ವತಿಯಿಂದ ಉಭಯ ಮಹನೀಯರ ಜಯಂತಿಯನ್ನು ಸರಳವಾಗಿ ಆಚರಿಸಿ ಗೌರವ ಸಮರ್ಪಿಸಲಾಯಿತು.