ಜಿಲ್ಲೆ

ಉಚಿತ ಕೊಡುಗೆಗಳಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ : ಅಶ್ವಿನಿ ರಂಜನ್

ಮೈಸೂರು: ರಾಜಕೀಯ ಪಕ್ಷಗಳ ಉಚಿತ ಕೊಡುಗೆ ಘೋಷಣೆಗಳು ರಾಜ್ಯ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಪ್ರಥಮ್ ಮೈಸೂರು ಸಂಸ್ಥೆಯ ಟ್ರಸ್ಟಿ ಅಶ್ವಿನಿ ರಂಜನ್ ಕಳವಳ ವ್ಯಕ್ತಪಡಿಸಿದರು.

ಮೈಸೂರು ಮುಕ್ತ ವೇದಿಕೆ ವತಿಯಿಂದ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ‘ಭಾರತ ದಲ್ಲಿ ಭ್ರಷ್ಟ ಚುನಾವಣಾ ವ್ಯವಸ್ಥೆ ಮತ್ತು ಅದರ ಸುಧಾರಣಾ ಮಾರ್ಗಗಳು’ ವಿಷಯದ ಕುರಿತು ಶನಿವಾರ ಆಯೋಜಿಸಲಾಗಿದ್ದ ನಾಗರಿಕರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಚಿತ ಕೊಡುಗೆ ಘೋಷಿಸುವ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಸಂಪನ್ಮೂಲದಿಂದ ಜನರಿಗೆ ಕೊಡುಗೆಗಳನ್ನು ನೀಡುವು ದಿಲ್ಲ. ಅಧಿಕಾರಕ್ಕೆ ಬಂದ ನಂತರ ಅವರು ಜನರಿಂದ ಸಂಗ್ರಹವಾದ ತೆರಿಗೆ ಹಣದಲ್ಲಿಯೇ ಕೊಡುಗೆಗಳನ್ನು ನೀಡುತ್ತಾರೆ. ಇದರಿಂದ ರಾಜ್ಯ ಅಭಿವೃದ್ಧಿಯಲ್ಲಿ ಹಿಂದುಳಿಯಲಿದೆ ಎಂದರು.

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಜನರಿಗೆ ಮದ್ಯ, ಊಟವನ್ನು ನೀಡಲಾಗುತ್ತದೆ. ಅಂತಿಮವಾಗಿ ಹಣವನ್ನು ಸಹ ನೀಡಲಾಗುತ್ತಿದೆ. ಜನರು ಇಂತಹ ಆಮಿಷೆಗಳಿಗೆ ಒಳಗಾಗಬಾರದು. ರಾಜಕೀಯ ಪಕ್ಷಗಳು ಜನರಿಗೆ ಆಮಿಷೆಗಳನ್ನು ಒಡ್ಡುವ ಬದಲು ಅಧಿಕಾರಕ್ಕೆ ಬಂದ ಸಂದರ್ಭ ಉತ್ತಮ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿ ಎಂದು ಹೇಳಿದರು.

ವೇದಿಕೆಯಲ್ಲಿ ಕ್ಯಾಬಿನೇಟ್ ಕಾರ್ಯಾಲಯದ ನಿವೃತ್ತ ಕಾರ್ಯದರ್ಶಿ ರವಿ ಜೋಶಿ, ವೇದಿಕೆ ಸಂಚಾಲಕ ಪ್ರೊ.ಎಂ.ಉಮಾಪತಿ, ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಹಾಗೂ ಇತರರು ಇದ್ದರು.