ಜಿಲ್ಲೆ

ಉಚಿತ ಕನ್ನಡಕಕ್ಕಾಗಿ ಮುಗಿಬಿದ್ದ ಜನ! - ಚಿಗಟೇರಿ ಆಸ್ಪತ್ರೆಯತ್ತ ಎಲ್ಲರ ಕಣ್ಣು

ದಾವಣಗೆರೆ: ಭಾನುವಾರ, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಜನವೋ ಜನ. ರೂಂ. ನಂ 126ರಿಂದ (ನೇತ್ರ ಚಿಕಿತ್ಸಾ ಕೊಠಡಿ) ಹಿಡಿದು ಆಸ್ಪತ್ರೆ ಹೊರಾವರಣದವರೆಗೆ ಸಾರ್ವಜನಿಕರು ಸರದಿ ಸಾಲಿನಲ್ಲಿ ಬೆಳಗ್ಗೆಯಿಂದಲೇ ಜಮಾಯಿಸಿದ್ದರು.

ಅಷ್ಟಕ್ಕೂ ರಜಾದಿನ ಯಾವ ಸಿಬ್ಬಂದಿ ಹೊರರೋಗಿಗಳ ಚೀಟಿ ಮಾಡಿಕೊಡುತ್ತಾರೆ ಎಂದು ಕುತೂಹಲಕ್ಕೆ ನೋಡಲು ಹೋದವರಿಗೆ ಗೊತ್ತಾಗಿದ್ದು ಅಲ್ಲಿ ಜನ ಸೇರಿದ್ದು ಉಚಿತ ಕನ್ನಡಕಕ್ಕಾಗಿ ಅಂಥ!

ಹೌದು, ಆಸ್ಪತ್ರೆಯ ಸಂಚಾರಿ ನೇತ್ರ ಚಿಕಿತ್ಸಾ ಘಟಕದಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಬಡವರಿಗಾಗಿ ಈ ವಿಶೇಷ ಕೊಡುಗೆ ಆಯೋಜಿಸಲಾಗಿತ್ತು. ಸಮೀಪ ದೃಷ್ಟಿದೋಷವುಳ್ಳವರಿಗೆ ಈ ಸುವರ್ಣಾವಕಾಶ ಎಂಬುದಾಗಿ ಹೊರಡಿಸಿದ್ದ ಸಣ್ಣ ಪ್ರಕಟಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರ ಪರಿಣಾಮ ಜನಸಂದಣಿಗೆ ಕಾರಣವಾಗಿತ್ತು.

ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ವತಿಯಿಂದ ಈ ಹಿಂದೆ ನೇತ್ರ ಪರೀಕ್ಷೆ ಮಾಡಲ್ಪಟ್ಟ ಅನೇಕ ಸಾರ್ವಜನಿಕರೂ ಇದರಲ್ಲಿ ಭಾಗಿಯಾಗಿದ್ದರು. ಪ್ರಕಟಣೆಯಲ್ಲಿ ತಿಳಿಸಿದಂತೆ ಬಿಪಿಎಲ್ ಕಾರ್ಡು ಹಾಗೂ ಕನ್ನಡಕದ ನಂಬರ್ ಇರುವ ಚೀಟಿಗಳನ್ನು ಫಲಾನುಭವಿಗಳು ತಂದಿದ್ದರು.

ಎಸ್‌ಎಸ್ ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಕನ್ನಡಕಗಳನ್ನು ವಿತರಿಸಿದರು. ದಾವಣಗೆರೆ ಅಲ್ಲದೆ ಹರಪನಹಳ್ಳಿ, ಕೂಡ್ಲಿಗಿ, ರಾಣೆಬೆನ್ನೂರು, ಹಾವೇರಿ, ಶಿರಹಟ್ಟಿ ಮೊದಲಾದ ಕಡೆಗಳಿಂದ ಜನರು ಧಾವಿಸಿದ್ದರು. ಸುಮಾರು 600 ಮಂದಿ ಕನ್ನಡಕದ ಲಾಭ ಪಡೆದರು. ಆಸ್ಪತ್ರೆ ಪ್ರಭಾರ ಅಧೀಕ್ಷಕ ಡಾ. ನಾಗೇಂದ್ರಪ್ಪ, ನಿವಾಸಿ ವೈದ್ಯಾಧಿಕಾರಿ ಡಾ. ನಾಗವೇಣಿ, ನಿವೃತ್ತ ನೇತ್ರಾಧಿಕಾರಿ ಡಾ. ಎಸ್.ಕೆ. ರಂಗನಾಥ್ ಇದ್ದರು.

‘ಕೆಲವು ಬಡವರಿಗೆ ಕಣ್ಣಿನ ಸಮಸ್ಯೆ ಇದ್ದರೂ ಕನ್ನಡಕ ಕೊಳ್ಳಲಾಗದ ಪರಿಸ್ಥಿತಿ ಇದೆ. ಅಂಥವರಿಗೆ ನೆರವಾಗಲೆಂಬ ಸದುದ್ದೇಶದಿಂದ ಈ ಹಿಂದೆಯೂ ಇಂತಹ ವಿಶೇಷ ಕಾರ್ಯಕ್ರಮ ನಡೆಸಲಾಗಿತ್ತು. ಇಂದು 1 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ತಡವಾಗಿ ಬಂದವರು ಫೋನ್ ಮಾಡಿ ಕೇಳುತ್ತಿದ್ದರು’ ಎಂದು ಡಾ.ಎಸ್.ಕೆ. ರಂಗನಾಥ್ ತಿಳಿಸಿದರು.