ಜಿಲ್ಲೆ

ಉಗ್ರರ ಪ್ರಕರಣ ಎನ್ಐಎಗೆ ನೀಡಲು ಬಿಜೆಪಿ ಒತ್ತಾಯ

ಕೊಪ್ಪಳ: ಕಾಂಗ್ರೆಸ್ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದ್ದು, ಉಗ್ರರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಅಧಿಕಾರಕ್ಕಾಗಿ ಉಗ್ರರನ್ನು ಪೋಷಿಸುತ್ತಿದೆ. ಬೆಲೆ ಏರಿಕೆ, ಮನಬಂದಂತೆ ತೆರಿಗೆ ವಿಧಿಸಿ ರೈತರನ್ನು ಆತ್ಮಹತ್ಯೆಗೆ ಪದೆಚೋದಿಸುತ್ತಿದೆ. ರಾಜ್ಯದ ಉನ್ನತ ಅಧಿಕಾರಿಗಳನ್ನು ಸೇವಕರಂತೆ ಬಳಸುತ್ತಿದೆ. ಅಪರಾಧ ಪ್ರಮಾಣ ಹೆಚ್ಚುತ್ತಿದೆ. ಕಲುಷಿತ ನೀರು ಸೇವಿಸಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಗ್ಯಾರಂಟಿ ಹೆಸರಿನಲ್ಲಿ ಜನರ ಅಭಿಯ ಯೋಜನೆಗಳಿಗೆ ತಡೆ ನೀಡಲಾಗಿದೆ. ಕಲ್ಯಾಣ ಕಾರ್ಯಕ್ಕೆ ಯಾವುದೇ ಅನುದಾನ ಮೀಸಲಿಟ್ಟಲ್ಲ. ಬಿಜೆಪಿ‌ ಶಾಸಕರನ್ನು ಸದನದಿಂದ ಅಮಾನತು ಮಾಡಿ ಜನ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.

ಉಗ್ರರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ಪ್ರಜಾಪ್ರಭುತ್ವ ವಿರೋಧಿ ನೀತಿ ಕೈ ಬಿಡಬೇಕು. ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಬಿಜೆಪಿ‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಗರಾವ್ ಕುಲಕರ್ಣಿ, ರಮೇಶ ಬಡಿಗೇರ, ಆರ್.ಬಿ.ಪಾನಘಂಟಿ, ವಿ.ಎಂ.ಭೂಸನೂರಮಠ, ರಾಜು ಬಾಕಳೆ, ಚಂದ್ರಶೇಖರ್ ಕವಲೂರು, ಪ್ರದೀಪ್‌ ಹಿಟ್ನಾಳ್ ಇತರರಿದ್ದರು.