ಮೂಡಿಗೆರೆ: ಪಹಲ್ಗಾಮ್‌ನಲ್ಲಿ ಹಿಂದು ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ್ದನ್ನು ಖಂಡಿಸಿ ಜಯ ಕರ್ನಾಟಕ ಹಾಗೂ ಹಿಂದು ಸಂಘಟನೆಗಳು ಬಂದ್ ಕರೆಕೊಟ್ಟಿದ್ದರಿಂದ ಶುಕ್ರವಾರ ವಾರದ ಸಂತೆ, ಮೆಡಿಕಲ್, ಹಾಲು, ಪತ್ರಿಕೆ ಮಾರಾಟ ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಲಾಯಿತು.
ಬಂದ್ ಕರೆ ಮಾಹಿತಿ ತಿಳಿಯದ ಹಿನ್ನೆಲೆಯಲ್ಲಿ ಬೆಳಗ್ಗೆ ಹೋಟೆಲ್, ಹೂವು, ತರಕಾರಿ, ದಿನಸಿ ಸೇರಿದಂತೆ ಎಲ್ಲ ಅಂಗಡಿಗಳ ಬಾಗಿಲು ತೆರೆದು ವ್ಯಾಪಾರದಲ್ಲಿ ತೊಡಗಿದ್ದರು. ಬೆಳಗ್ಗೆ 9 ಗಂಟೆಗೆ ಬಂದ ಹಿಂದು ಸಂಘಟನೆ ಕಾರ್ಯಕರ್ತರು ಪಟ್ಟಣದ ಅಂಗಡಿಗಳಿಗೆ ತೆರಳಿ ಬಾಗಿಲು ಮುಚ್ಚಿ ಸಹಕರಿಸುವಂತೆ ವರ್ತಕರಲ್ಲಿ ಮನವಿ ಮಾಡಿದರು. ವರ್ತಕರು ಅಂಗಡಿಬಾಗಿಲು ಮುಚ್ಚಿದರು. ದಿಢೀರ್ ಬಂದ್ ಕರೆಯಿಂದಾಗಿ ಹೋಟೆಲ್‌ಗಳಲ್ಲಿ ಅಡುಗೆ ಹಾಗೆಯೇ ಉಳಿಯುವಂತಾಯಿತು.
ಪಟ್ಟಣದಲ್ಲಿ ಶುಕ್ರವಾರ ಸಂತೆ ಬಂದ್ ಮಾಡಲು ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಸಂತೆ ಎಂದಿನಂತೆ ನಡೆಯಿತು. ಕಚೇರಿ ಕೆಲಸಕ್ಕೆಂದು ಬಂದವರಿಗೆ ಕಚೇರಿ ಕೆಲಸ ಸಾಧ್ಯವಾಗದೆ ನಿರಾಸೆಯಿಂದ ವಾಪಸಾಗಬೇಕಾಯಿತು. ಪಟ್ಟಣಕ್ಕೆ ಬಂದವರು ಮಧ್ಯಾಹ್ನದ ಊಟಕ್ಕಾಗಿ ಪರದಾಡಿದರು. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆಟೋಗಳ ಸಂಚಾರ ಎಂದಿನಂತೆ ಇತ್ತು. ಸಂಜೆ 4ಕ್ಕೆ ಎಲ್ಲ ಅಂಗಡಿಗಳನ್ನೂ ತೆರೆಯಲಾಯಿತು.
ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್‌ಮಾಡಿಸಲು ಜಯ ಕರ್ನಾಟಕ ಸಂಘಟನೆ ಮತ್ತು ಹಿಂದು ಸಂಘಟನೆ ಕಾರ್ಯಕರ್ತರು ಕಾರು ಮತ್ತು ಬೈಕ್‌ಗಳಲ್ಲಿ ಪಟ್ಟಣ, ಹ್ಯಾಂಡ್‌ಪೋಸ್ಟ್, ಗಂಗನಮಕ್ಕಿ, ಎಂಜಿ ರಸ್ತೆ, ಕೆ.ಎಂ.ರಸ್ತೆ ಗೆಂಡೆಹಳ್ಳಿ ರಸ್ತೆ, ಮೇಗಳಪೇಟೆ, ಬಿಳಗುಳ ಸೇರಿದಂತೆ ಎಲ್ಲ ಕಡೆ ತೆರಳಿ ಮುಚ್ಚಿಸಿದರು. ಬಿಳಗುಳದಲ್ಲಿ ಪಿಎಸ್‌ಐಗಳಾದ ಶ್ರೀನಾಥ್ ರೆಡ್ಡಿ ಮತ್ತು ಶಶಿ ಅವರು ಕಾರ್ಯಕರ್ತರನ್ನು ತಡೆದು ಬಲವಂತವಾಗಿ ಮುಚ್ಚಿಸಬೇಡಿ. ಪಟ್ಟಣದಲ್ಲಿ ತಿರುಗಾಡಬೇಡಿ. ಮನೆಗೆ ಹೋಗಿ ಎಂದು ತಿಳಿಸಿದರು.
ಜಯಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಕಾರ್ತಿಕ್ ಪಟ್ಟದೂರು, ಬಿಜೆಪಿ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಫ್ರಾನ್ಸಿಸ್, ವಿಹಿಂಪ ತಾಲೂಕು ಅಧ್ಯಕ್ಷ ಮಹೇಶ್ ಸಾಲುಮರ, ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ತಾರೇಶ್, ಬಜರಂಗದಳದ ಮುಖಂಡ ಸಂತೋಷ್, ಪ್ರಣಿತ್, ಪ್ರಶಾಂತ್ ಹಂಡುಗುಳಿ, ನಿತಿನ್, ಮಧು, ಮಹೇಶ್, ಸಾಗರ್, ಸೌಕತ್, ಪ್ರಶಾಂತ್ ಇತರರಿದ್ದರು.