ಕೊಡೇಕಲ್: ಬಸವಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಅಪಾಯಕಾರಿ ಮಟ್ಟದಲ್ಲಿ ಉಕ್ಕೇರುತ್ತಿದೆಯಾದರೂ ಮೀನುಗಾರರು ಹರಿಗೋಲು ಸಹಾಯದಿಂದ ನದಿಗಿಳಿದು ಮೀನು ಹಿಡಿಯುವ ದುಸ್ಸಾಹಸಕ್ಕೆ ಕೈ ಹಾಕುತ್ತಿರುವುದರ ಜತೆಗೆ ಮೊಂಡತನ ಪ್ರದರ್ಶಿಸುತ್ತಿರುವುದು ಗುರುವಾರ ಬೆಳಕಿಗೆ ಬಂದಿದೆ.
ನದಿಗೆ ೬೫ ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರು ಕೃಷ್ಣಾ ನದಿಗೆ ಹರಿಯುತ್ತಿದೆ. ಅದರಲ್ಲೂ ಛಾಯಾ ಭಗವತಿ ದೇವಸ್ಥಾನದ ಬಳಿ ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಸೀಳಿಕೊಂಡು ಭೀತಿ ಹುಟ್ಟಿಸುವಂತಿದೆಯಾದರೂ ಮೀನುಗಾರರು ಅಪಾಯವನ್ನು ಲೆಕ್ಕಿಸದೆ ಹರಗೊಲುಗಳನ್ನು ನದಿಗೀಳಿಸುವ ಮೂಲಕ ಮೀನು ಹಿಡಿಯುತ್ತಿರುವುದು ಆತಂಕ ತರಿಸಿದೆ.
ಪ್ರತಿ ವರ್ಷ ಕೃಷ್ಣಾ ನದಿಗೆ ಪ್ರವಾಹ ಉಂಟಾದ ವೇಳೆ ನಿಗಮದ ಅಧಿಕಾರಿಗಳು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಕುರಿತಾಗಿ ಧ್ವನಿವರ್ಧಕದ ಮೂಲಕ ಇಲ್ಲವೆ ಡಂಗೂರ ಸಾರುವ ಮೂಲಕ ಜಾಗೃತಿ ಮೂಡಿಸುತ್ತಾರೆ. ಆದರೆ ಗ್ರಾಮದ ಹೊರ ವಲಯದಲ್ಲಿ ಹರಿಯುವ ನದಿಯ ಬಳಿ ವಾಸಿಸುವ ಜನರ ಮತ್ತು ಮೀನುಗಾರರೊಂದಿಗೆ ಸಭೆ ನಡೆಸುವ ಮೂಲಕ ಅವರಲ್ಲಿ ಪ್ರವಾಹದ ಕುರಿತಾಗಿ ಜಾಗೃತಿ ಮೂಡಿಸುವ ಕರ‍್ಯವನ್ನು ಮಾಡವುದು ಅತ್ಯಗತ್ಯವಾಗಿದೆ.
ಆದರೆ ಸ್ಥಳೀಯ ಅಧಿಕಾರಿಗಳು ಗ್ರಾಮಗಳಲ್ಲಿಯೇ ಡಂಗೂರ ಸಾರಿ ಕೈ ತೊಳೆದುಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಈ ಕುರಿತು ಜಿಲ್ಲಾಡಳಿತ ಗಂಭೀರ ಚಿಂತನೆ ಮಾಡಿ, ಸಂಭವನೀಯ ದುರಂತ ತಪ್ಪಿಸಬೇಕಾಗಿದೆ.