ನರಗುಂದ: ವಿಪರೀತ ಮಳೆಯಿಂದ ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿವೆ. ಯಾವಗಲ್ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತವಾಗಿದ್ದರಿಂದ ನರಗುಂದ-ರೋಣ ತಾಲೂಕುಗಳ ಸಂಪರ್ಕ ಕಡಿತವಾಗಿದೆ. ಅಲ್ಲದೆ, ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಸಂಗಮವಾಗುವ ಮೆಣಸಗಿ ಗ್ರಾಮದಲ್ಲಿ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. ನೆರೆ ಭೀತಿ ಹಿನ್ನೆಲೆಯಲ್ಲಿ ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಜತೆಗೆ ನವಿಲುತೀರ್ಥ ಜಲಾಶಯದಿಂದ 18 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ನಿಂದ 1.29 ಲಕ್ಷ ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಹರಿಬಿಡಲಾಗಿದೆ. ಹೀಗಾಗಿ ನದಿಪಾತ್ರದ ಗ್ರಾಮಗಳಲ್ಲಿ ನೆರೆ ಭೀತಿ ಎದುರಾಗಿದೆ.
ಮಲಪ್ರಭಾ ನದಿ ಪ್ರವಾಹದಿಂದ ನರಗುಂದ ತಾಲೂಕಿನ ಲಖಮಾಪೂರ, ವಾಸನ, ಬೆಳ್ಳೇರಿ, ಕೊಣ್ಣೂರ, ಬೂದಿಹಾಳ, ಕಪ್ಪಲಿ, ಕಲ್ಲಾಪೂರ, ಶಿರೋಳ ಗ್ರಾಮಗಳು, ರೋಣ ತಾಲೂಕಿನ ಮೆಣಸಗಿ, ಹೊಳೆಆಲೂರ, ಕುರುಗೋವಿನಕೊಪ್ಪ, ಅಮರಗೋಳ ಗ್ರಾಮಗಳಿಗೆ ಆತಂಕ ಎದುರಾಗಿದೆ. ಜೂ. 1ರಿಂದ ಇದುವರೆಗೆ ಶೇ. 46 ರಷ್ಟು ಹೆಚ್ಚುವರಿ ಮಳೆಯಾಗಿದೆ. ಇದರಿಂದ ಏಕಾಏಕಿ ನೆರೆಯ ಆತಂಕ ಕಾಡುತ್ತಿದೆ.
ಮುಂಜಾಗ್ರತೆ ಕ್ರಮವಾಗಿ ತಾಲೂಕಿನ ಲಖಮಾಪೂರ ಗ್ರಾಮಸ್ಥರನ್ನು ಬೆಳ್ಳೇರಿಯ ಕೃಷಿ ಡಿಪ್ಲೊಮಾ ಕಾಲೇಜ್ನ ಕಾಳಜಿ ಕೇಂದ್ರಕ್ಕೆ ಶನಿವಾರ ಸ್ಥಳಾಂತರಿಸಲಾಯಿತು. ತಾಲೂಕು ಅಧಿಕಾರಿಗಳು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಹಾಯ ಮಾಡುತ್ತಿದ್ದಾರೆ. ‘ಪ್ರತಿವರ್ಷ ಮಳೆ ಬಂದಾಗ ನಮ್ಮೂರು ಸಂಪೂರ್ಣ ನಡುಗಡ್ಡೆಯಂತಾಗುತ್ತದೆ. ನಮ್ಮ ಕಷ್ಟ ಯಾರೊಬ್ಬರಿಗೂ ಅರ್ಥವಾಗುತ್ತಿಲ್ಲ. ಸಚಿವರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ನಮ್ಮೂರಿನ ಸೇತುವೆ ನಿರ್ವಿುಸಿಕೊಟ್ಟಿಲ್ಲ. ಆದರೆ, ನಾವು ಮಾತ್ರ ನೀವು ಹೇಳಿದಾಗಲೆಲ್ಲ ನಮ್ಮ ಜನ, ಜಾನುವಾರುಗಳೊಂದಿಗೆ ಸ್ಥಳಾಂತರವಾಗಬೇಕು. ಇದ್ಯಾವ ನ್ಯಾಯ? ಎಂದು ಲಖಮಾಪುರ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಲಖಮಾಪುರದ 156 ಜನರು ತಮ್ಮ ಅಗತ್ಯ ಸಾಮಗ್ರಿ, ಜಾನುವಾರುಗಳೊಂದಿಗೆ ಕಾಳಜಿ ಕೇಂದ್ರಕ್ಕೆ ದಾಖಲಾಗಿದ್ದಾರೆ. ರಾಮದುರ್ಗ ಕ್ರಾಸ್ನಿಂದ ಲಖಮಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತಗೊಂಡಿದೆ ಹಾಗೂ ಕೊಣ್ಣೂರಿನ ಹಳೆಯ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ತುಂಬಿ ಹರಿಯುತ್ತಿದೆ. ಬೆಣ್ಣೆಹಳ್ಳದ ಪ್ರವಾಹದಿಂದ ತಾಲೂಕಿನ ಬನಹಟ್ಟಿ, ಮೂಗನೂರ, ಹದಲಿ, ಸುರಕೋಡ, ಕುರ್ಲಗೇರಿ, ಗಂಗಾಪೂರ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.