ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಳಗಾವಿಯಲ್ಲಿ ಕಾಟಾಚಾರದ ಅಧಿವೇಶನ ನಡೆದಿದ್ದು, ಉತ್ತರ ಕರ್ನಾಟಕ ಭಾಗದ ಜನರು ಭ್ರಮ ನಿರಸನಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಯೋಜನೆಗಳು, ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಿ ಅದಕ್ಕೆ ಪರಿಹಾರ ಸಿಗುತ್ತದೆ ಎಂದು ಜನರು ನಿರೀಕ್ಷೆ ಮಾಡಿದ್ದರು. ಆದರೆ, ರಾಜ್ಯ ಸರ್ಕಾರ ಕಾಟಾಚಾರಕ್ಕೆ ಅಧಿವೇಶನ ನಡೆಸಿತು ಎಂದು ಟೀಕಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ, ಕೃಷ್ಣಾ ಮೇಲ್ದಂಡೆ, ಘಟಪ್ರಭಾ, ಮಲಪ್ರಭಾ, ಮಹದಾಯಿ ಸಮಸ್ಯೆಗಳ ಜತೆಗೆ ಕೈಗಾರಿಕೆಗಳ ಸ್ಥಾಪನೆ, ರಸ್ತೆ, ರೈಲು ಮೂಲಸೌಕರ್ಯಗಳ ಕುರಿತು ರ್ಚಚಿಸಲು ಅವಕಾಶ ಕೊಡಲಿಲ್ಲ. ಶಾಸಕರು ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವಾರು ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರೂ ಯಾವುದೇ ಸಚಿವರು ಗಂಭೀರವಾಗಿ ಪರಿಗಣಿಸಿ ಉತ್ತರ ಕೊಡಲಿಲ್ಲ. ನಿಜವಾಗಿಯೂ ಇದು ನಾಚಿಗೇಡಿನ ಸಂಗತಿ. ಈ ಸರ್ಕಾರಕ್ಕೆ ಉತ್ತರ ಕರ್ನಾಟಕ ಅವರ ನಕ್ಷೆಯಲ್ಲಿ ಇದೆಯೋ ಇಲ್ಲವೋ ಎನ್ನುವ ಸಂಶಯ ಬರುತ್ತಿದೆ. ಉತ್ತರದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.