ಬಾಗಲಕೋಟೆ: ಮುಖ್ಯಮಂತ್ರಿಯನ್ನೆ ಮಾಡದ ಮಲ್ಲಿಕಾರ್ಜುನ ಅವರನ್ನು ಪಿಎಂ ಮಾಡುತ್ತಾರಾ ಎಂದು ಕಾಂಗ್ರೆಸ್ ವಿರುದ್ದ ಗೇಲಿ ಮಾಡಿದ್ದ ಮಾಜಿ ಡಿಸಿಎಂ ಈಶ್ವರಪ್ಪ ಅವರಿಗೆ ಸಚಿವ ಆರ್.ಬಿ.ತಿಮ್ಮಾಪುರ ತಿರುಗೇಟು ನೀಡಿದ್ದು, ಏಕವಚನದಲ್ಲೆ ಈಶ್ವರಪ್ಪ ವಿರುದ್ದ ಹರಿಹಾಯ್ದಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ತಿಮ್ಮಾಪುರ, ಅವನಿಗೆ (ಈಶ್ವರಪ್ಪ) ಏನು ಗೊತ್ತಿಲ್ಲ. ಪ್ರಧಾನಿ ಯಾರನ್ನು ಮಾಡುತ್ತಾರೆ, ಸಿಎಂ ಯಾರನ್ನು ಮಾಡುತ್ತಾರೆಂದು ಇಷ್ಟು ವರ್ಷ ರಾಜಕಾರಣ ಮಾಡಿರುವ ಅವರಿಗೆ ಗೊತ್ತಿಲ್ಲ. ಜಾತಿಗೊಂದು ಮುಖ್ಯಮಂತ್ರಿ ಮಾಡುತ್ತಾರಾ? ಅವಕಾಶ ಸಿಕ್ಕಾಗ ದಲಿತರು ಆಗುತ್ತಾರೆ. ಈ ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿಲ್ವಾ? ಅವರು ದಲಿತರು ಅಲ್ವಾ? ಈ ಈಶ್ವರಪ್ಪ ದಲಿತರನ್ನು ಸಿಎಂ ಮಾಡುತ್ತಾನಂತಾ? ಅವನಿಗೆ ಕಳಕಳಿ ಇದ್ದರೆ ಮಾಡಲು ಹೇಳಿ. ಪಾಪ ಅವನಿಗೆ ಟಿಕೆಟ್ಕೊಟ್ಟಿಲ್ಲ, ಅದಕ್ಕೆ ಮಾತನಾಡುತ್ತಾನೆ ಎಂದು ಟಾಂಗ್ ನೀಡಿದರು.
ಹಿಜಾಬ್ ವಿಚಾರದಲ್ಲಿ ಸಿಎಂ ಹೇಳಿಕೆ ಸಮರ್ಥನೆ :
ಹಿಜಾಬ್ ನಿಷೇಧ ಹಿಂಪಡೆಯುತ್ತೇವೆ ಎಂದು ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ತಿಮ್ಮಾಪುರ, ನಾವು ಹಿಂದು ಧರ್ಮಕ್ಕೆ ಎಷ್ಟು ಮಹತ್ವ ಕೊಡುತ್ತೆವೆಯೋ ಅಷ್ಟೆ ಮಹತ್ವವನ್ನು ಮುಸ್ಲಿಂ ಧರ್ಮಕ್ಕೂ ಕೊಡುತ್ತೇವೆ. ಕಾಂಗ್ರೆಸ್ ಪಕ್ಷ ಸರ್ವಜನ, ಸರ್ವ ಜಾತಿಗಳನ್ನು ಸಮಾನ ದೃಷ್ಟಿಯಿಂದ ಕಾಣುತ್ತದೆ. ಆ ದಿಸೆಯಲ್ಲಿ ನಮ್ಮ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ಹಿಜಾಬ್ ಬಗ್ಗೆ ಹಿಂದಿನವರು ತೆಗೆದುಕೊಂಡು ನಿರ್ಧಾರ ತಪ್ಪು ಎಂದು ಹೇಳಿದ್ದಾರೆ. ಹಿಂದು ಧರ್ಮದಲ್ಲಿ ಇನ್ನೊಬ್ಬರಿಗೆ ಹರ್ಟ್ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ನಮ್ಮ ಹಿಂದು ಧರ್ಮ ಅದ್ಭುತವಾಗಿದೆ. ನಾವು ಸರ್ವ ಜನಾಂಗವನ್ನು ಪ್ರೀತಿ ಮಾಡುತ್ತೇವೆ. ಸಂವಿಧಾನ ಕೂಡ ಅದನ್ನೆ ಹೇಳುತ್ತದೆ ಎಂದರು.
ನಾವು ಹಿಜಾಬ್ ನಿಷೇಧ ಮಾಡಿರಲಿಲ್ಲ, ಸಮವಸ್ತ್ರ ಕಡ್ಡಾಯ ಮಾಡಿದ್ದೇವು ಎನ್ನುವ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ತಿಮ್ಮಾಪುರ, ನಮ್ಮದು ಓಲೈಕೆ ಇಲ್ಲ, ಎಂಥದ್ದು ಇಲ್ಲ. ಸಂವಿಧಾನ ಏನು ಹೇಳುತ್ತದೆ ಆ ಪ್ರಕಾರ ನಡೆಯುತ್ತೇವೆ. ಒಬ್ಬರನ್ನು ಹತ್ತಿಕ್ಕಬಾರದು. ಆದರೆ, ಇವರು (ಬಿಜೆಪಿ) ಹತ್ತಿಕ್ಕಿದ್ದರು. ನಾವು ಯಾವ ಧರ್ಮದ ಆಚರಣೆಯನ್ನು ಹತ್ತಿಕ್ಕಿಡುವುದಿಲ್ಲ. ಅವರವರ ಆಚರಣೆ ಅವರು ಮಾಡಲಿ ಎಂದು ತಿಳಿಸಿದರು.