ಜಿಲ್ಲೆ

ಈಶ್ವರಪ್ಪ ಹೇಳಿಕೆಗೆ ಡಿಕೆಶಿ ಆಕ್ರೋಶ

ಗದಗ: ‘ತಲೆಕೆಟ್ಟ ಈಶ್ವರಪ್ಪ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಕಾಲ ಬರುತ್ತದೆ ಎಂದು ಹೇಳಿದ್ದರೂ ಈ ಕುರಿತು ಒಂದು ಮಾತೂ ಆಡದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಅತ್ಯಂತ ಖಂಡನೀಯ. ತ್ರಿವರ್ಣ ಧ್ವಜ ಕಾಂಗ್ರೆಸ್ ಪಕ್ಷದ ಧ್ವಜವಾಗಿತ್ತು. ಅಶೋಕ ಚಕ್ರ ಸೇರಿ ದೇಶದ ಧ್ವಜವಾಗಿದೆ. ಹೀಗಾಗಿ ರಾಷ್ಟ್ರ ಧ್ವಜವೇ ನಮ್ಮ ಧರ್ಮ ಎಂದರು.

ನಮ್ಮ ಸರ್ಕಾರವಿದ್ದಾಗ ಯಾರಾದರೂ ಹೀಗೆ ಮಾತನಾಡಿದ್ದರೆ ಹತ್ತು ನಿಮಿಷದಲ್ಲಿ ರಾಜೀನಾಮೆ ಪಡೆಯುತ್ತಿದ್ದೆವು. ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇವೆ. ಈಶ್ವರಪ್ಪ ವಿರುದ್ಧ ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸುತ್ತೇವೆ ಎಂದರು. ಅಲ್ಲದೆ, ಪೊಲೀಸ್ ಅಧಿಕಾರಿಗಳು ಸರ್ಕಾರಿ ನೌಕರರ ಬದಲು ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಆದರೆ, ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅಧಿಕಾರಿಗಳು ಮರೆಯಬಾರದು. ಜನರು ನಮಗೂ ಅವಕಾಶ ನೀಡಲಿದ್ದಾರೆ ಎಂಬುದು ಗೊತ್ತಿರಲಿ ಎಂದು ಹೇಳಿದರು.

ಬಿಜೆಪಿಯ ಅಧಿಕಾರಾವಧಿಯಲ್ಲಿ ಕಾಶ್ಮೀರ ವಿಚಾರ, ಗೋಹತ್ಯೆ, ಮತಾಂತರ ಕಾಯ್ದೆ ಹೀಗೆ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳೆ ಪ್ರಮುಖವಾಗಿವೆ. ದೇಶ ಇಬ್ಭಾಗ ಮಾಡುವುದನ್ನು ಬಿಟ್ಟರೆ ಯಾವುದೇ ಜನಪರ ಕಾನೂನು ಜಾರಿಗೆ ತಂದಿಲ್ಲ. ಅಲ್ಲದೆ, ಕೃಷಿ ಕಾಯ್ದೆ ತಂದಿದ್ದನ್ನು ರೈತರ ಹೋರಾಟಕ್ಕೆ ಮಣಿದು ಕಾಯ್ದೆಗಳನ್ನು ಹಿಂಪಡೆಯಿತು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷ ತನ್ನದೇ ಕೊಡುಗೆ ನೀಡಿದೆ. ಕಾಂಗ್ರೆಸ್ ತನ್ನ ಆಚಾರ, ವಿಚಾರ ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡದೇ ಚುನಾವಣೆಯಲ್ಲಿ ಸೋತರಿಬಹುದು. ಯಾವುದೇ ಕಾರಣಕ್ಕೂ ಕಾರ್ಯಕರ್ತರು ಗೆಲ್ಲುವ ಆಸೆ ಕಳೆದುಕೊಳ್ಳಬಾರದು. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮಲ್ಲಿ ಹುಮ್ಮಸ್ಸು, ಉತ್ಸಾಹ, ನಂಬಿಕೆ ಕಾಣುತ್ತಿದೆ. ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅಧಿಕ ಸ್ಥಾನಗಳು ಗೆಲ್ಲಬಹುದೆಂಬ ಸಮೀಕ್ಷೆ ಬಂದಿದೆ. ಕಾರ್ಯಕರ್ತರು ಚುನಾವಣೆಯಲ್ಲಿ ವ್ಯಕ್ತಿಗೆ ಮಣೆ ಹಾಕದೇ ಪಕ್ಷದ ಗೆಲುವಿಗಾಗಿ ದುಡಿಯಬೇಕು ಎಂದು ಅವರು ಹೇಳಿದರು.

ಹಿಜಾಬ್, ಬುರ್ಕಾ, ಕೇಸರಿ ಶಾಲು ಕುರಿತು ಯಾರೂ ಮಾತನಾಡಬಾರದು ಎಂದು ಮುಖಂಡರಿಗೆ, ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಆದರೆ, ನಾನು ಮಾತನಾಡುತ್ತೇನೆ. ಅಲ್ಪಸಂಖ್ಯಾತರನ್ನು ನಾವು ಮೊದಲಿನಿಂದಲೂ ರಕ್ಷಣೆ ಮಾಡಿಕೊಂಡು ಬಂದಿದ್ದೇವೆ. ಇಂದು ಮಾಡುತ್ತೇವೆ ಮುಂದೆಯೂ ಮಾಡುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಅವರು ಸ್ಪಷ್ಟಪಡಿಸಿದರು.

ಮುಂಬರುವ ಜಿಪಂ, ತಾಪಂ, ವಿಧಾನಸಭೆ ಚುನಾವಣೆಯನ್ನಿಟ್ಟುಕೊಂಡು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಂಡಿಲ್ಲ. ಬಿಜೆಪಿಯವರು ನುಡಿದಂತೆ ನಡೆಯುತ್ತಿಲ್ಲ. ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಆರಂಭಿಸಿದ ಪಾದಯಾತ್ರೆ ತಡೆಗೆ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿತು. ಕರೊನಾ ಸೋಂಕು ವ್ಯಾಪಿಸಲಿದೆ ಎಂದು ಬೊಬ್ಬೆ ಹಾಕಿದರು. ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಿದರು. ಆದರೆ, ಕಾಂಗ್ರೆಸ್ ಇದ್ಯಾವುದಕ್ಕೂ ಬಗ್ಗಲ್ಲ. ಶಾಸಕಾಂಗ ಪಕ್ಷದ ಸಭೆ ಕರೆದು ರ್ಚಚಿಸಿ ಅಂತಿಮ ನಿರ್ಣಯದೊಂದಿಗೆ ಮತ್ತೆ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಹೋರಾಟ ಮಾಡಲಾಗುತ್ತದೆ ಎಂದರು.

ಜನವಿರೋಧಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಭಯ ಶುರುವಾಗಿದೆ. ಹೀಗಾಗಿ ನಾವು ಯಾವುದೇ ಕಾರ್ಯಕ್ರಮ ನಡೆಸಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಇದೀಗ ಜಾತ್ರೆ ಉತ್ಸವಕ್ಕೆ ಅವಕಾಶ ನೀಡಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪ್ಲಾನ್ ಮಾಡುತ್ತೇವೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಆ ಎಲ್ಲ ಸಮಸ್ಯೆಗಳ ಬಗ್ಗೆ ಹೋರಾಟ ಆರಂಭಿಸುತ್ತೇವೆ, ಒಟ್ಟಾರೆ ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ, ಶಾಸಕ ಎಚ್.ಕೆ.ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಶಾಸಕರಾದ ಬಿ.ಆರ್.ಯಾವಗಲ್, ರಾಮಕೃಷ್ಣ ದೊಡ್ಡಮನಿ ಮತ್ತಿತರರು ಇದ್ದರು.