ಜಿಲ್ಲೆ

ಈಶ್ವರಪ್ಪ ರಾಜೀನಾಮೆಗೆ ಕೆಬಿಪಿ ಆಗ್ರಹ

Shivamogga

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಡಳಿತದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಲ್ಲಿ ಕೆ.ಎಸ್.ಈಶ್ವರಪ್ಪ ಸಂಪೂರ್ಣ ವಿಫಲರಾಗಿದ್ದು ತಕ್ಷಣವೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಪಡೆಯಬೇಕೆಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದರು.

ಜಿಲ್ಲೆಯಲ್ಲಿ ಆಡಳಿತ ಚುರುಕುಗೊಂಡಿಲ್ಲ. ನಿಷ್ಕ್ರಿಯ ಮಂತ್ರಿಯಾಗಿದ್ದಾರೆ. ಪ್ರಚಾರದ ವಿಚಾರ ಮುಂದಿಟ್ಟುಕೊಂಡಿದ್ದಾರೆಯೇ ಹೊರೆತು ಜನಪರ ಕೆಲಸಗಳು ಕಣ್ಣಿಗೆ ಕಾಣುತ್ತಿಲ್ಲ. ಕತ್ತಿ, ಗಾಂಜಾ, ಮದ್ಯ ಮಾರಾಟ ಹೆಚ್ಚುತ್ತಿದೆ ಎಂದು ಸ್ವತಃ ಸಚಿವರೇ ಹೇಳುತ್ತಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ತಮ್ಮ ಜವಾಬ್ದಾರಿ ಮರೆತು ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಗುಡುಗುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡಿ ಇಲ್ಲವಾದರೆ ಹೋಗಿ ಎನ್ನುವುದು ಅವರ ವೈಫಲ್ಯಕ್ಕೆ ಸಾಕ್ಷಿ. ಧೈರ್ಯ, ಸ್ಥೈರ್ಯ ತುಂಬಬೇಕಾದವರೇ ಪೊಲೀಸರು ನಿಷ್ಪ್ರಯೋಜಕವಾಗುತ್ತಿದ್ದಾರೆ ಎನ್ನುವ ಮೂಲಕ ಇಡೀ ಇಲಾಖೆಯನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

ಇಲಾಖೆ ಜತೆ ಸತತ ಸಭೆ ನಡೆಸಿ ಜಿಲ್ಲೆಯಲ್ಲಿ ಯಾವ ರೀತಿ ಕಾನೂನು ವ್ಯವಸ್ಥೆ ಇರಬೇಕೆಂಬುದನ್ನು ತಿಳಿಸಬೇಕಾದ ಸಚಿವರೇ ತಮ್ಮ ಜವಾಬ್ದಾರಿ ಮರೆತು ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಈ ಹಿಂದೆ ಚಾರುಲತಾ ಸೋಮಲ್ ಸೇರಿ ಹಲವು ನಿಷ್ಠಾವಂತ ಅಧಿಕಾರಿಗಳನ್ನು ಇದೇ ಬಿಜೆಪಿ ಸರ್ಕಾರ ವರ್ಗಾವಣೆ ಮಾಡಿತ್ತು. ಇದೀಗ ಎಸ್ಪಿ ಅವರ ಹೆಸರಿಗೆ ಕಳಂಕ ತರುವ ಮೂಲಕ ತಮಗೆ ಅನುಕೂಲ ಆಗುವ ಅಧಿಕಾರಿಯನ್ನು ತಂದು ಕೂರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಕ್ಷಸರು ನೀವೆ, ನಾವಲ್ಲ: ಈ ಹಿಂದೆ ಕರೊನಾ ಸೋಂಕು ಹರಡುತ್ತಿದ್ದು ತಾವುಗಳು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಕ್ಕೆ ನಾವು ರಾಕ್ಷಸರು, ರಾಕ್ಷಸರಿಗೆ ಕರೊನಾ ಬರುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಸನ್ನಕುಮಾರ್, ಈಶ್ವರಪ್ಪ ರಾಕ್ಷಸರಿರಬಹುದು. ಆದರೆ ಮಲೆನಾಡಿಗರಾದ ನಾವು ರಾಕ್ಷಸರಲ್ಲ ಎಂದು ಟಾಂಗ್ ನೀಡಿದರು.

ಸೀಲ್​ಡೌನ್ ಆದ ಏರಿಯಾ ನಿರ್ವಹಣೆ ಸರಿಯಾಗಿಲ್ಲ. ಹಣ್ಣು, ತರಕಾರಿ ಪ್ರತಿ ಮನೆಗಳಿಗೆ ತಲುಪುತ್ತಿಲ್ಲ. ದಿನಸಿ ಅಂಗಡಿಗಳನ್ನು ಮೊದಲು ಸಂಜೆ 6ಕ್ಕೆ ಮುಚ್ಚಿಸಲಾಯಿತು. ಆದರೆ ಮದ್ಯದಂಗಡಿಗಳಿಗೆ ರಾತ್ರಿ 8ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಮಧ್ಯಾಹ್ನ 2ರವರೆಗೆ ಅವಕಾಶ ಕಲ್ಪಿಸಿದ್ದಾರೆ. ಲಾಕ್​ಡೌನ್ ಜಾರಿಗೊಳಿಸುವ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿದೆ ಎಂದರು.

ಪಾಲಿಕೆ ಎದುರು ಹೋರಾಟ: ಪಾಲಿಕೆ ಪ್ರತಿಪಕ್ಷದ ನಾಯಕ ಎಚ್.ಸಿ.ಯೋಗೇಶ್ ಮಾತನಾಡಿ, ಪಾಲಿಕೆಯಲ್ಲಿ ಕರೊನಾ ಎದುರಿಸಲು ಲಕ್ಷಾಂತರ ಹಣ ಖರ್ಚು ಮಾಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಸೇರಿ ಭಾರಿ ಹಣ ಬಳಕೆ ಮಾಡಲಾಗಿದೆ. ಈ ಬಗ್ಗೆ ಮನವಿ ಮಾಡಿದರೂ ಶ್ವೇತಪತ್ರ ಹೊರಡಿಸುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಪಾಲಿಕೆ ವೈಫಲ್ಯದ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.