ಮೈಸೂರು: ಈಶಾನ್ಯ ಭಾರತದ ರಾಜ್ಯಗಳ ಅಭಿವೃದ್ಧಿಗೆ ನರೇಂದ್ರ ಮೋದಿ ಸರ್ಕಾರ ಕಟಿಬದ್ಧವಾಗಿ ದುಡಿಯುತ್ತಿದೆ. ಕಳೆದ 10 ವರ್ಷಗಳಲ್ಲಿ ಈ ರಾಜ್ಯಗಳ ಶ್ರೇಯೋವೃದ್ಧಿಗೆ ಸುಮಾರು ಐದು ಲಕ್ಷ ಕೋಟಿ ರೂ. ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಷ್ಟ್ರೀಯ ಏಕಾತ್ಮತಾ ಯಾತ್ರೆ ಅಂಗವಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪೂರ್ವದತ್ತ ನೋಡಿ’ ನೀತಿ ಅಡಿಯಲ್ಲಿ ಮೋದಿ ಅವರು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ ಅಭಿವೃದ್ಧಿಗೆ ಕಳೆದ 70 ವರ್ಷಗಳಲ್ಲಿ ಕಂಡೂ ಕೇಳರಿಯದಷ್ಟು ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದಾರೆ ಎಂದರು.
ತಮ್ಮ ಸಂಪುಟದ ಸಚಿವರಿಗೆ ಆದೇಶ ನೀಡಿರುವ ಮೋದಿ ಅವರು, ಈಶಾನ್ಯ ರಾಜ್ಯಗಳಲ್ಲಿ ಅನುಷ್ಠಾನ ಆಗುತ್ತಿರುವ ಕಾರ್ಯಕ್ರಮಗಳನ್ನು ಗಮನವಿಟ್ಟು ಪರಿಶೀಲನೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಅದರಂತೆ ನಾನೂ ಕಳೆದ ವರ್ಷ ನಾಲ್ಕು ದಿನಗಳ ಕಾಲ ನಾಗಾಲ್ಯಾಂಡ್, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳಿಗೆ ಭೇಟಿ ನೀಡಿದ್ದೆ. ಅಲ್ಲಿ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಕೈಗಾರಿಕೆಗಳ ಪ್ರಗತಿ ಪರಿಶೀಲನೆ ನಡೆಸುವುದರ ಜತೆಗೆ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದೆ ಎಂಬ ತಿಳಿಸಿದರು
1996ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿ ಈಶಾನ್ಯ ಭಾಗದ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭವನ್ನು ಸ್ಮರಿಸಿದ ಸಚಿವರು, ಆಗ ಅಷ್ಟೂ ರಾಜ್ಯಗಳು ಬಹಳ ಹಿಂದುಳಿದಿದ್ದವು. ಅದಕ್ಕೂ ಹಿಂದಿನ ಸರ್ಕಾರಗಳು ಈಶಾನ್ಯ ರಾಜ್ಯಗಳನ್ನು ಕಡೆಗಣಿಸಿದ್ದವು.
ಈ ಕಾರಣದಿಂದ ಆರು ದಿನಗಳ ಕಾಲ ಆ ರಾಜ್ಯಗಳಲ್ಲಿ ನಿರಂತರ ಪ್ರವಾಸ ಕೈಗೊಂಡಿದ್ದ ದೇವೇಗೌಡರು, ಅಂತಿಮವಾಗಿ 7,503.51 ಕೋಟಿ ರೂ. ಬೃಹತ್ ಪ್ಯಾಕೇಜ್ ಘೋಷಿಸಿದರು. ಕೂಡಲೇ 6,100 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಶಕೆ ಶುರುವಾಗಿದ್ದೇ ಆಗ ಎಂದು ಹೇಳಿದರು.
ಏಕ ಭಾರತ ಪರಿಕಲ್ಪನೆ ಅಡಿಯಲ್ಲಿ ಇಡೀ ದೇಶವನ್ನು ಒಗ್ಗಟ್ಟಾಗಿಡಲು ಇದೊಂದು ಅತ್ಯುತ್ತಮ ಕಾರ್ಯಕ್ರಮ. ಇದಕ್ಕಾಗಿ ನಾನು ಎಬಿವಿಪಿ ಸಂಘಟಕರನ್ನು ಅಭಿನಂದಿಸುತ್ತೇನೆ.
ಭಾರತ ವಿವಿಧತೆಯಲ್ಲಿ ಏಕತೆಯನ್ನು ಅಂತರ್ಗತ ಮಾಡಿಕೊಂಡಿರುವ ಅನನ್ಯ ರಾಷ್ಟ್ರ. ಈಶಾನ್ಯದಲ್ಲೇ ಅನೇಕ ಬುಡಕಟ್ಟುಗಳು, ಅನೇಕ ಭಾಷೆಗಳು, ಅನೇಕ ಸಂಸ್ಕೃತಿ, ಆಚಾರ ವಿಚಾರಗಳು ಅಡಗಿವೆ. ಅವರೆಲ್ಲರೂ ಒಬ್ಬರನ್ನು ಒಬ್ಬರು ಗೌರವಿಸಿಕೊಂಡು ಸೌಹಾರ್ದವಾಗಿ ಜೀವನ ನಡೆಸುತ್ತಿದ್ದು, ಭಾರತದ ಶ್ರೇಷ್ಠತೆ ಅಡಗಿವುದೇ ಇಲ್ಲಿ ಎಂದು ಹೇಳಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಮಾತನಾಡಿದರು. ಕಾಂಬೋಡಿಯ ದೇಶದ ಕಾನ್ಸುಲ್ ಜನರಲ್ ಕಾರ್ತಿಕ್ ತಲ್ಲಂ, ಎಬಿವಿಪಿ ಅಖಿಲ ಭಾರತ ಉಪಾಧ್ಯಕ್ಷ ಪ್ರೊ.ಮಂದ್ರಾ ಭಾನುಶೇರ್, ಎಬಿವಿಪಿಯ ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್‌ನ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮಂಗಳಗಿ, ವಿದ್ಯಾರ್ಥಿಗಳ ಪ್ರವಾಸದ ಉಸ್ತುವಾರಿ ಡಾ.ಲಿಖಿತಾ ಗೌಡ, ಜಂಟಿ ಉಸ್ತುವಾರಿ ಪ್ರಜ್ವಲ್, ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ವಿಶ್ವಪ್ರಸಾದ್ ಆಳ್ವಾ, ಉಪಾಧ್ಯಕ್ಷ ಪ್ರೊ.ಎಂ.ಆರ್.ಗಂಗಾಧರ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಚಂದ್ರಶೇಖರ್ ಸೇರಿದಂತೆ ಈಶಾನ್ಯ ಭಾಗದ ಏಳು ರಾಜ್ಯಗಳಿಂದ ಆಗಮಿಸಿದ್ದ 216ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಧರಿಸಿದ್ದ ಧಿರಿಸು, ಉಡುಪುಗಳು ಎಲ್ಲರ ಗಮನ ಸೆಳೆಯಿತು. ಸಚಿವ ಕುಮಾರಸ್ವಾಮಿ ಅವರು, ಆ ವಿದ್ಯಾರ್ಥಿಗಳನ್ನು ವಿಚಾರಿಸಿದರು. ಅವರ ವಿದ್ಯಾಭ್ಯಾಸ, ಕರ್ನಾಟಕದ ಕುರಿತ ಅವರ ಭಾವನೆಗಳ ಬಗ್ಗೆ ಕೇಳಿ ತಿಳಿದುಕೊಂಡರು.