ಕಲಬುರಗಿ: ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ನಿಮಿತ್ತ ಸೋಮವಾರ ನಗರ ಸೇರಿ ಜಿಲ್ಲಾದ್ಯಂತ ಉತ್ಸಾಹದಿಂದ ಮತದಾನ ನಡೆಯಿತು. ಕಲಬುರಗಿ ಜಿಲ್ಲೆಯಲ್ಲಿ ಶೇ.66ರಷ್ಟು ಮತದಾನವಾಗಿದ್ದು, ಏಳು ಜಿಲ್ಲೆಗಳನ್ನು ಒಳಗೊಂಡ ಇಡೀ ಕ್ಷೇತ್ರದಲ್ಲಿ ಪ್ರತಿಶತ 69.51 ಮತದಾನವಾಗಿದೆ.
ಚಿಂಚೋಳಿಯಲ್ಲಿ ಒಂದು ಪುಟ್ಟ ಘಟನೆ ಹೊರತುಪಡಿಸಿದರೆ ಇಡೀ ಜಿಲ್ಲೆಯಲ್ಲಿ ಶಾಂತಿಯುತವಾಗಿ ಪದವೀಧರರು ಮತದಾನ ಮಾಡಿ, ಪ್ರಬುದ್ಧತೆ ಮೆರೆದರು.
ಬಿಜೆಪಿಯಿಂದ ಅಮರನಾಥ ಪಾಟೀಲ್, ಕಾಂಗ್ರೆಸ್‌ನಿಂದ ಚಂದ್ರಶೇಖರ ಪಾಟೀಲ್, ಪಕ್ಷೇತರರಾಗಿ ನಾರಾಪ್ರತಾಪರೆಡ್ಡಿ ಸೇರಿದಂತೆ ಒಟ್ಟು ೧೯ ಅಭ್ಯರ್ಥಿಗಳು ಕಣದಲ್ಲಿದ್ದು, ಬೆಳಗ್ಗೆ 8 ಗಂಟೆಯಿಂದ ಸಂಜೆ ೪ರವರೆಗೆ ಸಮಯ ನಿಗದಿಯಾಗಿದ್ದರೂ ಸಹ ಸರತಿ ಜಾಸ್ತಿ ಇರುವ ಕಾರಣಕ್ಕೆ ೫.೩೦ಗಂಟೆವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಮಳೆಯ ಕಾರಣಕ್ಕೆ ಬೆಳಗ್ಗೆ ಸ್ವಲ್ಪ ಮತದಾನ ಕಡಿಮೆಯಾಗಿದ್ದರೂ ಸಹ ಮಧ್ಯಾಹ್ನದ ಹೊತ್ತಿಗೆ ಏರುಗತಿಯಲ್ಲಿ ಸಾಗಿತ್ತು. ಮಧ್ಯಾಹ್ನಕ್ಕೆ ನೂರಾರು ಜನರು ಏಕಕಾಲಕ್ಕೆ ಮತಗಟ್ಟೆಯತ್ತ ಆಗಮಿಸಿ, ಸರತಿಯಲ್ಲಿ ನಿಂತ್ತು ಮತದಾನ ಮಾಡಿದರು. ಮಧ್ಯಾಹ್ನ ೧೨ ಗಂಟೆ ಹೊತ್ತಿಗೆ ಶೇ.೨೬, ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಶೇ.೪೫.೦೩ ಮತದಾನವಾಗಿತ್ತು. ಅಂತಿಮವಾಗಿ ಅಂದಾಜು ಶೇ. ಶೇ.೬೯.೫೧ ರಷ್ಟು ಮತದಾನವಾಯಿತು.
ಜಿಲ್ಲಾದ್ಯಂತ ೪೧ ಮುಖ್ಯ, ೬ ಹೆಚ್ಚುವರಿ ಸೇರಿ ೪೭ ಮತಗಟ್ಟೆಗಳಲ್ಲಿ ತುರುಸಿನ ಮತದಾನ ನಡೆಯಿತು. ಎಲ್ಲೆಡೆ ಆಯಾ ಅಭ್ಯರ್ಥಿಗಳ ಬೆಂಬಲಿಗರು, ಆಯಾ ಪಕ್ಷದ ಮುಖಂಡರು ಟೆಂಟ್ ಹಾಕಿಕೊಂಡು ಕುಳಿತು ಮತದಾರರನ್ನು ಒಲಿಸಿಕೊಳ್ಳುವ ಕೊನೇ ಹಂತದ ಪ್ರಯತ್ನವನ್ನು ಮಾಡಿದರು. ಕಲಬುರಗಿ ಜಿಲ್ಲೆಯಲ್ಲಿ ೩೮೫೧೯ ಮತದಾರರಲ್ಲಿ ೧೬,೪೯೮ ಪುರುಷರು, ೯೨೭೧ ಮಹಿಳಾ ಪದವೀಧರರು ಮತದಾನ ಮಾಡಿದ್ದಾರೆ.