ಹಾಸನ: ನಗರದ ಹೊಸಲೈನ್ ರಸ್ತೆ ಬಳಿ ಇರುವ ಹಳೆಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಗುರುವಾರ ರಂಜಾನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರೆ, ಇವರಿಗೆ ಶುಭ ಕೋರಲು ಆಗಮಿಸಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಅಕ್ಕಪಕ್ಕದಲ್ಲಿಯೇ ಒಟ್ಟಿಗೆ ಕುಳಿತುಕೊಂಡು ಕೆಲ ಸಮಯ ಉಭಯ ಕುಶಲೋಪರಿ ವಿಚಾರಿಸಿದರು.
ಈದ್ಗಾ ಮೈದಾನಕ್ಕೆ ಮೊದಲು ಕಾಂಗ್ರೆಸ್ ಮುಖಂಡರು ಆಗಮಿಸಿದ್ದರು. ನಂತರ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಕೂಡ ಬಂದರು. ಒಟ್ಟಿಗೆ ಈದ್ಗಾ ಸಮಿತಿ ಕಚೇರಿಯಲ್ಲಿ ಕುಳಿತು ಕೆಲ ಸಮಯ ವಿವಿಧ ವಿಚಾರಗಳನ್ನು ಚರ್ಚೆ ಮಾಡಿದರು. ನಂತರ ಮುಖ್ಯದ್ವಾರದಲ್ಲಿ ಒಂದು ಕಡೆ ಜೆಡಿಎಸ್ ಇನ್ನೊಂದು ಕಡೆ ಕಾಂಗ್ರೆಸ್ ಅವರು ನಿಂತು ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭ ಕೋರಿದರು.
ಈ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಸಯ್ಯದ್ ಅಕ್ಬರ್, ಅಕ್ಮಲ್, ಹೊಂಬೇಶ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಎಚ್.ಕೆ. ಜವರೇಗೌಡ, ಬನವಾಸೆ ರಂಗಸ್ವಾಮಿ, ಕೃಷ್ಣಕುಮಾರ್, ಮಲ್ಲಿಗೆವಾಳ್ ದೇವಪ್ಪ, ರಂಜಿತ್ ಗೊರೂರು, ಜಾವಗಲ್ ಮಂಜುನಾಥ್, ಪ್ರಕಾಶ್, ರಾಮಚಂದ್ರ ಇತರರು ಉಪಸ್ಥಿತರಿದ್ದರು.