ಜಿಲ್ಲೆ

ಈಡಿಗರ ಹಾಸ್ಟೆಲ್‌ಗೆ 5 ಎಕರೆ ಜಮೀನು

ಚಿತ್ರದುರ್ಗ:ಜಿಲ್ಲಾ ಆರ್ಯ ಈಡಿಗರ ಸಮಾಜದ ವಿದ್ಯಾರ್ಥಿನಿಲಯ, ಸಮುದಾಯ ಭವನಕ್ಕಾಗಿ ನಗರದಲ್ಲಿ ಐದು ಎಕರೆ ಜಮೀನು ಮಂಜೂರು ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ರಜತ ಮಹೋತ್ಸವ, ಶ್ರೀ ಬ್ರಹ್ಮರ್ಷಿ ನಾರಾಯಣ ಗುರುಗಳ 170ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಎರಡು ಕೋಟಿ ರೂ.ವೆಚ್ಚದಲ್ಲಿ ಹಿರಿಯೂರಲ್ಲಿ ಈಡಿಗರ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಚಿತ್ರದುರ್ಗದಲ್ಲೂ ಈ ಭವ ನ, ಹಾಸ್ಟೆಲ್ ನಿರ್ಮಿಸಲು ಜಮೀನು ಗುರುತಿಸುವಂತೆ ಡಿಸಿಗೆ ಸೂಚಿಸುವುದಾಗಿ ಹೇಳಿದರು.
ಈಡಿಗ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ನಾನು ಶಾಸಕ, ಮಂತ್ರಿಯಾಗಲು ಈ ಸಮಾಜದ ಬೆಂಬಲ ಕಾರಣವಾಗಿದೆ. ಮಾಜಿ ಸಿಎಂ ಡಿ.ದೇವರಾಜ ಅರಸು, ಎಚ್.ಆರ್.ಬಸವರಾಜಪ್ಪ ಮತ್ತಿತರ ಹಿರಿಯರಿಂದಾಗಿ ನಮ್ಮ ಕುಟುಂಬ ರಾಜಕಾರಣಕ್ಕೆ ಪ್ರವೇಶಿಸಿತು. ಸಹಾಯ ಮಾಡುವ ಶಕ್ತಿ ಈ ಸಮುದಾಯದ ರಕ್ತದಲ್ಲಿದೆ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ತಿಮ್ಮೇಗೌಡ ಮಾತನಾಡಿ, ಬಿಲ್ಲವರು-ಈಡಿಗರು ಒಂದಾದರೆ ರಾಜ್ಯದಲ್ಲಿ ಸಮುದಾಯದ ಶಕ್ತಿ ಹೆಚ್ಚಾಗಲಿದೆ. ಸಮಾಜದ ಮಹಿಳಾ ಸಂಘಟನೆ ಬಲಿಷ್ಠವಾಗಬೇಕು ಎಂದು ಆಶಿಸಿದರು.
ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಸಂಘದ ಹಾಸ್ಟೆಲ್‌ಗಳು, ಸಮುದಾಯ ಭವನಗಳಿವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ನಿರ್ಮಾಣವಾಗಬೇಕು. ಬೆಂಗಳೂರಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಘದ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ ಎಂದರು.
ಬೆಂಗಳೂರು ಜೆಪಿಎನ್ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ್ ಮಾತನಾಡಿ, ಸಂಘ ಹಾಸ್ಟೆಲ್‌ಗಳಲ್ಲಿದ್ದು ಭವಿಷ್ಯ ಕಂಡುಕೊಂಡವರು ಸಂಘಟನೆಗೆ ಶಕ್ತಿ ತುಂಬಬೇಕು. ಈ ನಿಟ್ಟಿನಲ್ಲಿ ಪ್ರವಾಸದ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಶ್ರೀಗಳಿಗೆ ಮನವಿ ಮಾಡಿದರು.
ನಮ್ಮ ಟ್ರಸ್ಟಿನಿಂದ ಸಮುದಾಯದ ಆರ್ಥಿಕ ಹಿಂದುಳಿದ ಮಹಿಳೆಯರಿಗೆ ಒಂದು ತಿಂಗಳ ಕಾಲ ಹೊಲಿಗೆ ತರಬೇತಿ ನೀಡಲಾಗುತ್ತಿದ್ದು ಇದರ ಸದುಪಯೋಗ ಆಗಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ಎಚ್.ಜೀವನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಯ ಈಡಿಗರ ಮಹಾಸಂಸ್ಥಾನ, ಸೋಲೂರು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ, ತೀರ್ಥಹಳ್ಳಿ ತಾಲೂಕು ಗರ್ತಿಕೆರೆ ಶ್ರೀ ನಾರಾಯಣಗುರು ಮಹಾ ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾ ಮೀಜಿ ಸಾನ್ನಿಧ್ಯ ವಹಿಸಿದ್ದರು.
ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್, ಹಿರಿಯೂರು ನಗರಸಭೆ ಅಧ್ಯಕ್ಷ ಜೆ.ಆರ್.ಅಜಯ್‌ಕುಮಾರ್, ಜಿಲ್ಲಾ ಆರ್ಯ ಈಡಿಗರ ಸಂಘದ ಮಹಿಳಾ ಅಧ್ಯಕ್ಷೆ ಅನುರಾಧಾ ರವಿಕುಮಾರ್, ಸಿಎಂ ವಿಶೇಷಾಧಿಕಾರಿ ಶ್ರೀನಿವಾಸ್, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಎಸ್.ವೆಂಕಟೇಶ್, ಸಂಘದ ದಾವಣಗೆರೆ ಅಧ್ಯಕ್ಷ ಎಚ್.ಶಂಕರ್, ಟಿ.ಸ್ವಾಮಿ, ಶಿವಕುಮಾರ್, ಎ.ನಾಗರಾಜ್, ಮೀನಾ, ಲಕ್ಷ್ಮೀಕಾಂತ್ ಹಾಗೂ ಪದಾಧಿಕಾರಿಗಳು,ಪ್ರಮುಖರು ಇದ್ದರು.
ನಿವೇಶನ ದಾನಿಗಳು, ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮುದಾಯದ ಬಡ ಮಹಿಳೆಯರ ಸ್ವಾವಲಂಬನೆಗೆ ಸಹಾಯಧನ ನೀಡಲಾಯಿತು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬ್ರಹ್ಮ ಶ್ರೀ‌ನಾರಾಯಣ ಗುರುಗಳ ಭಾವಚಿತ್ರ ದ ಮೆರವಣಿಗೆ ನಗರದ ನೀಲಕಂಠೇಶ್ವರ ದೇವಾಲಯದಿಂದ ರಂಗಮಂದಿರದವರೆಗೆ ಜರುಗಿತು.