ಶಿಕಾರಿಪುರ: ಈಡಿಗ ಸಮಾಜವು ಅತ್ಯಂತ ಸ್ವಾಭಿಮಾನಿ ಮತ್ತು ಶ್ರಮಿಕ ಸಮಾಜ. ಇಂತಹ ಸಮಾಜವನ್ನು ಪ್ರತಿನಿಸುವ ನಾವು ಸಮುದಾಯವನ್ನು ಸದೃಢಗೊಳಿಸುವ ಅಗತ್ಯವಿದೆ ಎಂದು ಆರ್ಯ ಈಡಿಗ ನಾರಾಯಣಗುರು ಬಳಗದ ಪ್ರಚಾರ ಸಮಿತಿ ಅಧ್ಯಕ್ಷ ಇ.ಎಚ್.ಬಸವರಾಜ್ ಹೇಳಿದರು.
ನಾರಾಯಣಗುರು ಈಡಿಗರ ಬಳಗ ಪೌರವಿಹಾರದಲ್ಲಿ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರೂ ಸುಶಿಕ್ಷಿ ತರಾಗಬೇಕು ಎಂದು ನಾರಾಯಣಗುರುಗಳು ಆಶಿಸಿದ್ದರು. ಅವರ ಆಶಯಕ್ಕೆ ತಕ್ಕಂತೆ ನಾವು ಹೆಜ್ಜೆಯಿಡಬೇಕು. 110 ವರ್ಷಗಳ ಕೆಳಗೆ ಟಿ.ದಾಸಪ್ಪ ಗುರುಮೂರ್ತಿ ನೆಟ್ಟಕಲ್ಲಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೆಳೆದ ಈ ಸಂಘ ಇಂದು ರಾಜ್ಯಾದ್ಯಂತ ವಿಸ್ತರಣೆಯಾಗಿದೆ ಎಂದರು.
ಶರಾವತಿ ಸಂತ್ರಸ್ತರು ನೀಡಿದ ಕೊಡುಗೆಯಿಂದ ಇಂದು ರಾಜ್ಯದಲ್ಲಿ ವಿದ್ಯುತ್ ಬೆಳಗುತ್ತಿದೆ. ಅವರ ತ್ಯಾಗ ರಾಜಕ್ಕೆ ಮಾದರಿ. ಅಲ್ಲದೆ ಈ ಸಮಾಜವು ಸಿನಿಮಾ, ಶಿಕ್ಷಣ, ರಾಜಕೀಯ ಸೇರಿ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಬಡವರಿಗೆ, ಹಿಂದುಳಿದವರಿಗೆ ಸಹಾಯ ಮಾಡುವ ಗುಣ ಹೊಂದಿದೆ ಎಂದರು.
ಸಮಾಜದ ಮುಖಂಡ ಚಾಮರಾಜ ಮಾತನಾಡಿ, ಶಿಕಾರಿಪುರ ತಾಲೂಕು ನಾರಾಯಣಗುರು ಈಡಿಗ ಬಳಗ ನೊಂದವರಿಗೆ, ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ. ಸಮಾಜದ ಕೆಲಸಗಳು ಹಾಗೂ ನೊಂದವರ ಪರವಾಗಿ ಕೆಲಸ ಮಾಡುತ್ತದೆ. ಶಿಕಾರಿಪುರದಲ್ಲಿ ನಿವೇಶನ ಖರೀದಿಸಿ ಸಮುದಾಯ ಭವನ ಕಟ್ಟುವ ಯೋಚನೆ ಇದೆ ಎಂದು ತಿಳಿಸಿದರು.
ಬಳಗದ ತಾಲೂಕು ಅಧ್ಯಕ್ಷ ಪ್ರಕಾಶ್ ಮಡುಬ ಸಿದ್ದಾಪುರ ಇತರರಿದ್ದರು. ಸಮಾಜದ ನಿವೃತ್ತ ಸರ್ಕಾರಿ ನೌಕರರನ್ನು ಹಾಗೂ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಯಾದ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿಸಲಾಯಿತು.