ಜಿಲ್ಲೆ

ಈಗಿನ ಕಾಲದಲ್ಲಿ ಪ್ಲಾಸ್ಟಿಕ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ!?

ಹಾಸನ : ಈಗಿನ ಕಾಲದಲ್ಲಿ ಪ್ಲಾಸ್ಟಿಕ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಅದರ ಮೇಲಿನ ಅತಿಯಾದ ಅವಲಂಬನೆ ನಮಗರಿವಿಲ್ಲದೆ ಹಲವಾರು ರೋಗಗಳಿಗೆ ಕಾರಣವಾಗುತ್ತಿದ್ದು, ನಮ್ಮೊಳಗೇ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಹಾಗಾಗಿ ವೈಜ್ಞಾನಿಕವಾಗಿ ಪ್ಲಾಸ್ಟಿಕ್ ಕಸ ನಿರ್ವಹಣೆಯಿಂದ ನಮಗೆ ನಾವೇ ಪರಿಹಾರ ಕಂಡುಕೊಳ್ಳಬಹುದು ಎಂದು ಸ್ವಚ್ಛ ಭಾರತ ಆಂದೋಲನದ ನೋಡಲ್ ಅಧಿಕಾರಿ ಎಚ್.ಎಸ್. ರವಿ ಕಿವಿಮಾತು ಹೇಳಿದರು.

ಹಾಸನ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಇತ್ತೀಚೆಗೆ ಸರ್ಕಾರಿ ಪ್ರೌಢಶಾಲೆ ಹಾಗೂ ಹಾಸನ ತಾಲೂಕಿನ ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಸದಿಂದ ರಸ ಜಾಥಾ ಹಾಗೂ ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ ಚಟುವಟಿಕೆ ಉದ್ಘಾಟಿಸಿ ಮಾತನಾಡಿ, ಅಪಾಯಕಾರಿ ಪ್ಲಾಸ್ಟಿಕ್ ನಿಂದ ಉಂಟಾಗುವ ಮಾಲಿನ್ಯ ಹಾಗೂ ಪ್ಲಾಸ್ಟಿಕ್‌ಗಳನ್ನು ವಿಂಗಡಿಸುವ ವಿಧಾನವನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಡಾ.ಎಚ್.ಜಿ.ಮಂಜುನಾಥ್ ಮಾತನಾಡಿ, ಬಳಸಿದ ಪ್ಲಾಸ್ಟಿಕ್‌ಗಳನ್ನು ವೇಸ್ಟ್ ಬಾಟಲ್‌ಗಳಲ್ಲಿ ತುಂಬಿ ಶಾಲಾವರಣದಲ್ಲಿ ಕಾಂಪೌಂಡ್ ಅಥವಾ ಇನ್ನಾವುದೇ ನಿರ್ಮಾಣ ಚಟುವಟಿಕೆಗಳಿಗೆ ಇಟ್ಟಿಗೆಯಂತೆ ಬಳಸಿಕೊಳ್ಳುವ ಬಗೆಯನ್ನು ಹಾಗೂ ಕಸದಿಂದ ರಸ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಬಿಜಿವಿಎಸ್ ಜಿಲ್ಲಾ ಸಹ ಕಾರ್ಯದರ್ಶಿ ವೇಣುಗೋಪಾಲ್ ಕಸದಿಂದ ರಸ ಹಾಗೂ ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ ಚಟುವಟಿಕೆ ಜಾಥಾಕ್ಕೆ ಚಾಲನೆ ನೀಡಿದರು.ವಿದ್ಯಾರ್ಥಿಗಳು ಪ್ಲಾಸ್ಟಿಕ್ ಸಂಗ್ರಹಿಸಿ ಬಾಟಲಿಯಲ್ಲಿ ಪ್ಲಾಸ್ಟಿಕ್ ಬಂಧಿಸುವ ಮೂಕಲ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಿಜಿವಿಎಸ್ ಹಾಸನ ತಾಲೂಕು ಸಮಿತಿ ಸದಸ್ಯರುಗಳಾದ ಮೋನಿಕಾ, ಶಾರದಾ, ಹನುಮಂತಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿವ್ಯ, ಇಕೊ ಕ್ಲಬ್ ಸಂಚಾಲಕ ಶಕೀಲ್ ಅಹ್ಮದ್, ಶಿಕ್ಷಕ ಗಿರೀಶ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್.ನೀಲಕಂಠಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಮೇಶ್, ಶ್ರೀನಿವಾಸ್ ಇತರರು ಇದ್ದರು.