ಜಿಲ್ಲೆ

ಈಗಲೂ ಸಾಮಾಜಿಕ ನ್ಯಾಯ ಮರೀಚಿಕೆ: ದಿನೇಶ್ ಅಮೀನ್ ಮಟ್ಟು ಅಸಮಾಧಾನ

ಮೈಸೂರು: ಈಗಲೂ ಸಾಮಾಜಿಕ ನ್ಯಾಯ ಮರೀಚಿಕೆಯೇ ಆಗಿದೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ಬಹುರೂಪಿಯ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ರಂಗಾಯಣದ ಆವರಣದ ಬಿ.ವಿ.ಕಾರಂತರ ರಂಗಚಾವಡಿಯಲ್ಲಿ ಶನಿವಾರ ಆಯೋಜಿಸಿದ್ದ ಸಾಮಾಜಿಕ ನ್ಯಾಯ-ಚಳವಳಿಗಳು ಮತ್ತು ರಂಗಭೂಮಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸಾಮಾಜಿಕ ನ್ಯಾಯ, ಸಂವಿಧಾನ ಆಶಯಗಳ ಅನುಷ್ಠಾನಗೊಂಡಿರುವ ಬಗ್ಗೆ ಆತ್ಮಾವಲೋಕನ ಮಾಡಬೇಕು. ಆದರೆ, ಇದನ್ನು ಸಂಸತ್ತು ಮಾಡಬೇಕು. ಸಂಸತ್ತಿನಲ್ಲಿರುವ 256 ಸಂಸದರು ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯುಳ್ಳವರು. ಇಂತಹವರನ್ನು ಸಂಸತ್ತಿನೊಳಗೆ ಬಿಟ್ಟು ಸಾಮಾಜಿಕ ನ್ಯಾಯ ಜಾರಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ರಾಜ್ಯದ ಶೇ.70ರಷ್ಟು ದಲಿತರ ಬಳಿ ಭೂಮಿ ಇಲ್ಲ. ಅವರಿಗೆ ಇನ್ನೂ ಶೇ.24ರಷ್ಟು ಮೀಸಲಾತಿಯೂ ಪೂರ್ಣಪ್ರಮಾಣದಲ್ಲಿ ದೊರೆತಿಲ್ಲ. ಮೀಸಲಾತಿ ಮತ್ತು ಭೂ ಸುಧಾರಣೆಯ ಗಂಭೀರ ವಿಚಾರದ ಬಗ್ಗೆ ಪಿಎಚ್.ಡಿ ಸಂಶೋಧನೆಗಳು ಆಗಬೇಕು ಎಂದು ಹೇಳಿದರು.

ದಲಿತರಿಗೆ ಮೀಸಲಾತಿ ಕಾರಣದಿಂದ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಆದರೆ, ಮುಸ್ಲಿಂರಿಗೆ ಪ್ರಾತಿನಿಧ್ಯವೇ ಇಲ್ಲವಾಗಿದೆ. 1952ರಲ್ಲಿ 25ಮುಸ್ಲಿಂ ಸಮುದಾಯದ ಸಂಸದರಿದ್ದರು. 2024ರಲ್ಲಿ 24 ಜನ ಇದ್ದಾರೆ. ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಮುದಾಯದ ಸಂಸದನಿಲ್ಲ. ಯಾವ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೆ ತರಬೇಕು. ಕೃಷಿ ಪದಾರ್ಥಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಭೂಮಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

‘ಪ್ರಜಾಪ್ರಭುತ್ವದ ಆಶಯ ಅನುಷ್ಠಾನ ಮತ್ತು ಜನತೆಯ ಹೋರಾಟ’ ಕುರಿತು ಮಾತನಾಡಿದ ಅಖಿಲ ಭಾರತ ಜನವಾದಿ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಅವರು, ಜನಪ್ರತಿನಿಧಿಗಳು ಒಂದು ಜಾತಿ, ಧರ್ಮ, ವರ್ಗದ ಪ್ರತಿನಿಧಿಗಳಂತೆ ವರ್ತಿಸುತ್ತಿದ್ದಾರೆ. ಸಂವಿಧಾನದ ಆಶಯಗಳು ಅಸ್ಥಿರಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಡುವ ಹೊಣೆಗಾರಿ ನಮ್ಮ ಮೇಲಿದೆ ಎಂದರು.

‘ಶೈಕ್ಷಣಿಕ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಚಾರಿತ್ರಿಕ ನಡೆ’ ಕುರಿತು ಮಾತನಾಡಿದ ಶ್ರೀಪಾದಭಟ್ ಅವರು, ಶಿಕ್ಷಣ ಎಂಬುದು ಸಾವಾಜಿಕ ನ್ಯಾಯ. ಆದರೆ, ಕೇಂದ್ರ ಸರ್ಕಾರ ರಚಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಮಾಜಿಕ ನ್ಯಾಯವೇ ಗೌಣವಾಗಿದೆ. ಶಿಕ್ಷಣ ಸಾರ್ವತ್ರೀಕರಣ ಆಗಿಲ್ಲ. ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎಂದರು.