ಹಾಸನ: ಕಾಂಗ್ರೆಸ್ ಇಂತಹ ಹತ್ತು ಸಮಾವೇಶಗಳನ್ನು ಮಾಡಿ ಏನೇ ಹೇಳಿಕೆ ನೀಡಿದರೂ ನಾನು ತಲೆ ಕೆಡಿಸಿಕೊಳ್ಳಲ್ಲ. ಈಗ ಇರುವುದು ಕಾಂಗ್ರೆಸ್ ಪಕ್ಷ ಅಲ್ಲ ಬದಲಿಗೆ ನಕಲಿ ಕಾಂಗ್ರೆಸ್ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ 28 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರು. ಈಗ ಜನರು ಸಂಕಷ್ಟದಲ್ಲಿ ಇದ್ದಾರೆ. ಒಮ್ಮೆ ರೈತರ ಸಾಲ ಮನ್ನಾ ಮಾಡಲಿ! ಐದು ಗ್ಯಾರಂಟಿ ಕೊಟ್ಟಿದಾರೆ. ಅದರ ಜತೆಗೆ ಇನ್ನೊಂದು ಗ್ಯಾರಂಟಿ ಕೊಡಿ. ಆರು ಜಿಲ್ಲೆಯ ಜನರನ್ನು ಕರೆ ತಂದು ಹಾಸನದಲ್ಲಿ ಸಮಾವೇಶ ಮಾಡಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಏನಿದೆ? ಸ್ವಾಭಿಮಾನಿ ಅಂತೆ, ಜನ ಕಲ್ಯಾಣ ಅಂತೆ ಎಂದು ಲೇವಡಿ ಮಾಡಿದರು.
ದೇವೇಗೌಡರು ಪ್ರಧಾನಮಂತ್ರಿ ಇದ್ದಾಗ ಕೇಂದ್ರ ಸರ್ಕಾರದ ನಬಾರ್ಡ್‌ನಿಂದ ರೈತರಿಗೆ ಕಾರ್ಯಕ್ರಮ ರೂಪದಲ್ಲಿ ಸಾಲ ಕೊಡುವಂತೆ ಮಾಡಿದರು. ನಬಾರ್ಡ್ ಮೂಲಕ ರೈತರಿಗೆ ಲೋನ್ ಕೊಡುವುದು, ರಸ್ತೆಗೆ ಹಣ ಕೊಡುವ ಕೆಲಸ ಮಾಡಿದರು. ದೇವೇಗೌಡರು ಏನನ್ನು ಪ್ರಸ್ತಾಪ ಮಾಡುವುದಿಲ್ಲ ಅಂತ ಇವತ್ತು ರಾಜ್ಯ ಸರ್ಕಾರದವರು ಹೇಳುತ್ತಿದ್ದಾರೆ. ಕೇಂದ್ರದಿಂದ ಸಿಗುವ ಸೌಲಭ್ಯವನ್ನು ರಾಜ್ಯಕ್ಕೆ ದೊರಕುವಂತೆ ಮಾಡಿದ್ದೇ ದೇವೇಗೌಡರು ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಸಾಲ ಮನ್ನಾ ಮಾಡದಿದ್ದರೆ 21 ಬ್ಯಾಂಕ್‌ಗಳು ಮುಳುಗಿ ಹೋಗುತ್ತಿದ್ದವು. ದೇವೇಗೌಡರನ್ನು ಸಾಕ್ಷಿ ಗುಡ್ಡೆ ಕೇಳುತ್ತಾರೆ. ಅಪೆಕ್ಸ್ ಬ್ಯಾಂಕ್‌ಗೆ 9162 ಕೋಟಿ ರೂ. ಕೊಡಿ ಎಂದು ಕೇಂದ್ರ, ಆರ್‌ಬಿಐ, ನಬಾರ್ಡ್‌ಗೆ ದೇವೇಗೌಡರು ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ ಬೆಳಗ್ಗೆ ಎದ್ದರೆ ಪ್ರಧಾನಮಂತ್ರಿಯನ್ನು ಬೈಯುತ್ತಾರೆ. ವಿಶ್ವಾಸ ಇಟ್ಟುಕೊಂಡರೆ ಮಾತ್ರ ಏನಾದರೂ ಕೊಡುತ್ತಾರೆ ಎಂದು ಟಾಂಗ್ ನೀಡಿದರು.
ಕುಮಾರಸ್ವಾಮಿ ಹಾಸನ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ಗಳ 531 ಕೋಟಿ ರೂ. ಸಾಲ ಮನ್ನಾ ಮಾಡಿದರು. 9600 ಕೋಟಿ ರೂ. ರಾಷ್ಟ್ರೀಯ ಬ್ಯಾಂಕ್‌ಗಳ ಸಾಲ ಮನ್ನಾ ಆಗಿದೆ. ಕಾಂಗ್ರೆಸ್‌ನವರೇ ರೈತರ ಬಗ್ಗೆ ಮಾತನಾಡುತ್ತಿರಲ್ಲಾ ಮೊದಲು ರೈತರ ಸಾಲ ಮನ್ನಾ ಮಾಡಿ. ದೇವೇಗೌಡರ ರಾಜಕೀಯ ಮುಗಿದು ಹೋಯ್ತು ಅಂತ ಬಾಷಣ ಮಾಡುತ್ತಾರೆ. ಈ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಏನು ಕೊಡುಗೆ ಕೊಟ್ಟಿದೆ ಎಂಬುದನ್ನು ಹೇಳಲಿ. ಬ್ರಿಟಿಷರ ಕಾಲದಲ್ಲಿ ಆಗಿದ್ದ ರೈಲ್ವೆ ಮಾರ್ಗ ಕಿತ್ತುಕೊಂಡು ಹೋದವರು ಕಾಂಗ್ರೆಸ್‌ನವರು ಎಂದು ಚಾಟಿ ಬೀಸಿದರು.
ದೇವೇಗೌಡರು ಪ್ರಧಾನಮಂತ್ರಿಯಾಗಿ ಹತ್ತೂವರೆ ತಿಂಗಳಿನಲ್ಲಿ ರೈಲ್ವೆ ಮಾರ್ಗ ಮಾಡಿದರು. ರೈಲ್ವೆ ಮಾರ್ಗ, ಕೋರ್ಟ್, ಬಸ್ ಸ್ಟಾೃಂಡ್ ಕಟ್ಟಿದ್ದು ಯಾರು? ಇವೆಲ್ಲಾ ಸಾಕ್ಷಿ ಗುಡ್ಡೆಗಳಲ್ಲವಾ?ಆಸ್ಪತ್ರೆ, ಇಂಜಿನಿಯರ್, ಮೆಡಿಕಲ್ ಕಾಲೇಜು, ಪಶು ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜುಗಳನ್ನು ನೋಡಿ. ಈ ಜಿಲ್ಲೆಯ ಜನ ದೇವೇಗೌಡರಿಗೆ, ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಅವರ ಋಣ ನಮ್ಮ ಮೇಲೆ ಇದೆ. ಅದನ್ನು ತೀರಿಸುತ್ತೇವೆ. ನನ್ನ ಕೈಲಾದ ಕೆಲಸವನ್ನು ಈ ಜಿಲ್ಲೆಗೆ ಮಾಡುತ್ತೇನೆ. ಇಂತಹ ಹತ್ತು ಸಮಾವೇಶ ಮಾಡಿದರೂ ನಾನೇನು ತಲೆ ಕೆಡಿಸಿಕೊಡಲ್ಲ. ಇವರಿಗೆ ತಾಕತ್ ಇದ್ದರೆ ಕಾಂಗ್ರೆಸ್ ಬಿಟ್ಟು ಬಂದು ನಮ್ಮ ರೀತಿ ಪಕ್ಷ ಕಟ್ಟಲಿ ಎಂದು ಸವಾಲು ಹಾಕಿದರು.
ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ ಅಂತಾರೆ. ಇವರು ಬಿ.ಎಲ್. ಶಂಕರ್ ಕರೆದೊಯ್ದು ಏನು ಮಾಡಿದರು. ನಮ್ಮಿಂದ ವಲಸೆ ಹೋದವರೇ ಅಲ್ಲಿ ಇರುವವರು. ಜೇನುಕಲ್ಲು ಸಿದ್ದೇಶ್ವರನೇ ಇದಕ್ಕೆ ಸಾಕ್ಷಿ. ಮೂರು ಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡಿಸದೆ ಎಲೆಕ್ಷನ್ ಮಾಡಿ ಗೆಲ್ಲಿಸಿಕೊಂಡು ಬಂದಿದ್ದೇನೆ. ಇವರೆಲ್ಲ ಜೆಡಿಎಸ್ ಮುಗಿದುಹೋಯ್ತು ಅಂತಾರೆ. 2028ಕ್ಕೆ ಜೆಡಿಎಸ್ ಏನು ಎಂದು ಗೊತ್ತಾಗುತ್ತದೆ. ಹಾಸನದಲ್ಲಿ ಯಾವಾಗ ಸಮಾವೇಶ ಮಾಡಬೇಕು ಎಂಬುದರ ಬಗ್ಗೆ ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ. ದೇವೇಗೌಡರು ಮೇಕೆದಾಟು ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡಿದ್ದಾರೆ. ಹಾಸನದ ಔಟರ್ ರಿಂಗ್ ರೋಡ್‌ಗೆ 750 ಕೋಟಿ ರೂ. ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಇದೆ ವೇಳೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಜೆಡಿಎಸ್ ಮುಖಂಡ ಗಿರೀಶ್ ಚನ್ನವೀರಪ್ಪ, ಬಿದರಿಕೆರೆ ಜಯರಾಂ, ಜಗದೀಶ್, ನಾಗರಾಜು ಇತರರು ಉಪಸ್ಥಿತರಿದ್ದರು.