ಜಿಲ್ಲೆ

ಈ ವರ್ಷ ಶುಲ್ಕ ಹೆಚ್ಚಿಸುವಂತಿಲ್ಲ; ಖಾಸಗಿ ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ

ಆನೇಕಲ್: ಖಾಸಗಿ ಶಾಲೆಗಳು ಈ ವರ್ಷ ಶುಲ್ಕ ಹೆಚ್ಚಿಸುವಂತಿಲ್ಲ. ಹೆಚ್ಚು ಮಾಡಿದರೆ ದೂರು ನೀಡುವಂತೆ ಸೂಚಿಸಲಾಗಿದ್ದು, ಸಹಾಯವಾಣಿ ತೆರೆಯಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಾಹಿತಿ ನೀಡಿದರು.

ಚಂದಾಪುರ ಸ್ವಾಮಿ ವಿವೇಕಾನಂದ ಶಾಲೆಗೆ ಶುಕ್ರವಾರ ಭೇಟಿ ನೀಡಿದ್ದ ಸಚಿವರು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿಜಿಆರ್ ಸಿಂಧ್ಯಾ ಜತೆ ಚರ್ಚೆ ನಡೆಸಿ ಮಾತನಾಡಿದರು.

ಸಂಬಳ ನೀಡದ ಬಗ್ಗೆಯೂ ಖಾಸಗಿ ಶಾಲೆಯ ಶಿಕ್ಷಕರು ಮನವಿ ಸಲ್ಲಿಸಿದ್ದಾರೆ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಆಗಸ್ಟ್ ಮೊದಲ ವಾರದಲ್ಲಿ ಹಾಗೂ ಪಿಯುಸಿ ಫಲಿತಾಂಶವು ಜುಲೈ 3ನೇ ವಾರದಲ್ಲಿ ಪ್ರಕಟವಾಗಲಿದೆ. ಎಲ್ಲ ಪರೀಕ್ಷೆಗಳು ಚೆನ್ನಾಗಿ ನಡೆದಿವೆ, ಶೇ.98 ಹಾಜರಾತಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೆಲವು ಪಾಲಕರು ಅಥವಾ ಸಂಬಂಧಿಕರಲ್ಲಿ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆಯಿಂದ ಹೊರಗುಳಿದವರಿಗೆ ಆಗಸ್ಟ್‌ನಲ್ಲೇ ಪೂರಕ ಪರೀಕ್ಷೆ ನಡೆಸಲಾಗುವುದು ಎಂದರು.

ವಿವಿಧ ಶಾಲೆಗೆ ಭೇಟಿ: ಆನೇಕಲ್ ಪಟ್ಟಣ, ತಾಲೂಕಿನ ಅತ್ತಿಬೆಲೆ, ಚಂದಾಪುರ, ಸರ್ಜಾಪುರ, ದೊಮ್ಮಸಂದ್ರದ ಕೆಲವು ಶಾಲೆಗಳ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಸರ್ಜಾಪುರದ ಶಾಲೆಗೆ ಭೇಟಿ ನೀಡಿ ಜಿಪಂ ಮಾಜಿ ಅಧ್ಯಕ್ಷ ಹಾಗೂ ಎಸ್‌ಟಿಆರ್‌ಆರ್ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು ಅವರೊಂದಿಗೆ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡು 10ನೇ ತರಗತಿ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದೆ. ಮಕ್ಕಳೂ ಕೂಡ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು ಮುಂದಿನ ಭವಿಷ್ಯಕ್ಕೆ ಸಿದ್ಧರಾಗಿದ್ದಾರೆ ಎಂದು ಸಿ.ಮುನಿರಾಜು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಾಮಮೂರ್ತಿ, ಅಧಿಕಾರಿ ವರ್ಗದವರು ಹಾಜರಿದ್ದರು.