ಕಾರವಾರ: ಸಮುದ್ರ ಮೀನುಗಾರಿಕೆಗೆ ಪ್ರಸಕ್ತ ಆರ್ಥಿಕ ವರ್ಷವು ಭಾರಿ ನಷ್ಟದ ಕಾಲವಾಗಿ ಪರಿಣಮಿಸಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಜಿಲ್ಲೆಯ ಆಳ ಸಮುದ್ರ ಮೀನು ಇಳುವರಿ ಶೇ. 16ರಷ್ಟು ಇಳಿಕೆ ಕಂಡಿದೆ.
2019-20ನೇ ಸಾಲಿನಲ್ಲಿ ಕಂಡುಬಂದ ಪ್ರವಾಹ, ಚಂಡ ಮಾರುತಗಳು ಹಾಗೂ ನಂತರ ಕೋವಿಡ್-19 ಲಾಕ್ಡೌನ್ ಹೀಗೆ ಅನೇಕ ಕಾರಣಗಳಿಗಾಗಿ ಸಾಕಷ್ಟು ಕಾಲ ಮೀನುಗಾರಿಕೆ ಮೇಲೆ ನಿರ್ಬಂಧ ಹೇರುವಂತಾಯಿತು. ಅಲ್ಲದೆ, ಮೀನುಗಾರಿಕೆಗೆ ತೆರಳಿದರೂ ಲಾಭದಾಯಕವೆನಿಸುವಷ್ಟು ಮೀನುಗಳ ಬೇಟೆ ಲಭ್ಯವಾಗಲಿಲ್ಲ. ಪರಿಣಾಮ ಮೀನುಗಾರಿಕೆಯ ಒಟ್ಟಾರೆ ಆದಾಯದ ಮೇಲೂ ಭಾರಿ ಹೊಡೆತ ಬಿದ್ದಿದ್ದು, ಇದರಿಂದ ಮೀನುಗಾರರು ಮಾತ್ರವಲ್ಲ, ಮೀನುಗಾರಿಕೆಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ಲಕ್ಷಾಂತರ ಕುಟುಂಬಗಳ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಅವಕಾಶ ಕೊಟ್ಟರೂ ಪ್ರಯೋಜನವಿಲ್ಲ: 2019-20ನೇ ಸಾಲಿನಲ್ಲಿ ಮೀನುಗಾರರಿಗೆ ಆದ ನಷ್ಟ ತುಂಬುವ ಸಲುವಾಗಿ ಕೇಂದ್ರ ಸರ್ಕಾರ ಮೀನುಗಾರಿಕೆಗೆ ಜೂನ್ 1ರ ಬದಲಾಗಿ 14ರವರೆಗೂ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ದಡದಿಂದ 12 ನಾಟಿಕಲ್ ಮೈಲ್ಗಳಾಚೆ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ, ಈ ಅವಕಾಶದಿಂದ ಮೀನುಗಾರರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಅರಬ್ಬಿ ಸಮುದ್ರದ ದಕ್ಷಿಣ ಮತ್ತು ಪೂರ್ವ ಮಧ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಮೇ 31ರಿಂದ ಜೂನ್ 4ರವರೆಗೆ ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳಲಿವೆ ಎಂದು ಭಾರತ ಸರ್ಕಾರದ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಬಾರದು ಎಂದು ಸೂಚಿಸಲಾಗಿದೆ. ಇನ್ನು ಜೂನ್ 4ರ ನಂತರ ಮಾನ್ಸೂನ್ ಅಬ್ಬರ ಶುರುವಾಗಲಿರುವುದರಿಂದ ಮೀನುಗಾರಿಕೆ ಕಷ್ಟವೇ ಸರಿ. ಅಲ್ಲದೆ, ಈಗಾಗಲೇ ಪರ್ಸೀನ್ ಬೋಟ್ಗಳಲ್ಲಿ ಕಾರ್ಯನಿರ್ವಹಿಸುವ ಕಾರ್ವಿುಕರು ಊರಿಗೆ ತೆರಳಿರುವುದರಿಂದ ಅವುಗಳು ಮೀನುಗಾರಿಕೆಗೆ ತೆರಳುವ ಅವಕಾಶಗಳು ಕಡಿಮೆಯಾಗಿದೆ ಎಂಬುದು ಮೀನುಗಾರರ ಅಭಿಮತ.
ರೂ. 94 ಕೋಟಿ ಆದಾಯ ಖೋತಾ: ಮೀನುಗಾರಿಕೆ ಇಲಾಖೆಯ ಮಾಹಿತಿಯಂತೆ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 898 ಕೋಟಿ ರೂ. ಮೌಲ್ಯದ 1,22,271 ಮೆಟ್ರಿಕ್ ಟನ್ ಮೀನನ್ನು ಸಮುದ್ರ ಮೀನುಗಾರಿಕೆಯಲ್ಲಿ ಹಿಡಿಯಲಾಗಿತ್ತು. 2019-20ನೇ ಸಾಲಿನಲ್ಲಿ 803 ಕೋಟಿ ರೂ. ಮೌಲ್ಯದ 1,01,944 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿದೆ. ಅಂದರೆ, ಒಟ್ಟಾರೆ 20,327 ಮೆಟ್ರಿಕ್ ಟನ್ ಮೀನಿನ ಇಳುವರಿ ಈ ವರ್ಷ ಕಡಿಮೆಯಾಗಿದೆ. ಆದಾಯದಲ್ಲಿ 94.34 ಕೋಟಿ ರೂ. ಖೋತಾ ಆಗಿದೆ.
12 ನಾಟಿಕಲ್ ಮೈಲ್ ಹೊರಗೆ ಜೂನ್ 14ರವರೆಗೂ ಯಾಂತ್ರೀಕೃತ ಮೀನುಗಾರಿಕೆ ನಡೆಸಲು ಕೇಂದ್ರ ಸರ್ಕಾರ ಈಗಾಗಲೇ ಅವಕಾಶ ನೀಡಿದೆ. ಈ ಬಗ್ಗೆ ಮೀನುಗಾರರಿಗೆ ತಿಳಿಸಲಾಗಿದೆ. ಇನ್ನು ಮೇ 31ರಿಂದ ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಉಂಟಾಗುವ ಬಗ್ಗೆಯೂ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. | ಪಿ.ನಾಗರಾಜ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ