ಅರಸೀಕೆರೆ: ಗ್ರಾಮೀಣ ಜನರ ಪಾಲಿನ ಸುಗಮ ಸಂಚಾರಕ್ಕೆ ಆಸರೆಯಾಗಬೇಕಿದ್ದ ಸಂಪರ್ಕ ರಸ್ತೆಗಳು ಮೃತ್ಯುಕೂಪವಾಗಿ ಮಾರ್ಪಟ್ಟಿದ್ದು, ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿವೆ.
ಇದಕ್ಕೆ ಪೂರಕ ಎನ್ನುವಂತೆ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದಿಂದ ಬೆಟ್ಟದ ಕೆಂಗಲ್ ಸಿದ್ದೇಶ್ವರಸ್ವಾಮಿ ಸನ್ನಿಧಿಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಪ್ರಯಾಣಿಕರು ಜಾರಿ ಬಿದ್ದೆದ್ದು ಹೋಗುತ್ತಿರುವುದಕ್ಕೆ ತಾಜಾ ನಿದರ್ಶನ. ಅಲ್ಲದೆ, ಶ್ರೀ ಕ್ಷೇತ್ರಕ್ಕೆ ತೆರಳುವ ಭಕ್ತರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಜೀವ ಕೈಯಲ್ಲಿಡಿದು ಪ್ರಯಾಣಿಸುವ ಸನ್ನಿವೇಶ ನಿರ್ಮಾರ್ಣಗೊಂಡಿದೆ. ಕಳೆದೊಂದು ವಾರದಿಂದ ಸುರಿಯುತ್ತಿರವ ಜಿಟಿ ಜಿಟಿ ಮಳೆ ರಸ್ತೆಯ ದುಸ್ಥಿತಿಯನ್ನು ಅನಾವರಣಗೊಳಿಸಿದೆ.
ಇದರಿಂದಾಗಿ ನಿತ್ಯ ಶಾಲಾ-ಕಾಲೇಜಿಗೆ ತೆರುವ ವಿದ್ಯಾರ್ಥಿಗಳು ಹಾಗೂ ಪಾಲಕರ ಪಡಿಪಾಟಲು ಹೇಳತೀರದಾಗಿದ್ದು, ಆಡಳಿತ ಯಂತ್ರದ ವಿರುದ್ಧ ಹಿಡಿಶಾಪ ಹಾಕುವಂತೆ ಮಾಡಿದೆ.
ಕೂಡು ರಸ್ತೆಯಲ್ಲಿ ಸಂಚರಿಸುವ ಕೃಷಿಕರು ತಮ್ಮ ಹೊಲ, ತೋಟಗಳಿಗೆ ತೆರಳಲು ಪರದಾಡುವಂತಾಗಿದೆ. ಜಮೀನು ಹದ ಮಾಡುವುದು, ಬಿತ್ತನೆ ಕಾರ್ಯದ ವೇಳೆ ನೇಗಿಲು, ನೊಗ, ಬಿತ್ತನೆ ಪರಿಕರ ಕೊಂಡೊಯ್ಯಲು ಹರಸಾಹಸ ಪಡುವಂತಾಗಿದೆ. ಹಲವು ಬಾರಿ ಕೆಸರು ಗುಂಡಿಯಲ್ಲಿ ಬಿದ್ದೆದ್ದು ಗಾಯಗೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿರುವ ನಿದರ್ಶನವೂ ಉಂಟು. ನರೇಗಾ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡುತ್ತಿದೆಯಾದರೂ ಈ ಅನುದಾನದಲ್ಲಿ ಯಾವ ಕೆಲಸಗಳಾಗುತ್ತಿವೆ ಎಂಬುದೂ ಕ್ಷೇತ್ರದ ಜನರಿಗೆ ಈವರೆಗೂ ಗೊತ್ತಾಗುತ್ತಿಲ್ಲ. ನಮ್ಮ ಹೊಲ, ನಮ್ಮ ರಸ್ತೆ ಹೆಸರಿನಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲು ಅನುದಾನದ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಗುಣಮಟ್ಟದ ಕೆಲಸಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಎನ್ನುವ ಸನ್ನಿವೇಶ ನಿರ್ಮಾಣಗೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಏಳೆಂಟು ವರ್ಷಗಳಿಂದ ರಸ್ತೆಯನ್ನು ದುರಸ್ತಿಪಡಿಸುವಂತೆ ಜನರು ತಾಲೂಕು ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರ ಒತ್ತಡಕ್ಕೆ ಮಣಿದು ಕೆಲ ತಿಂಗಳ ಹಿಂದೆ ಜಿಗಟು ಮಣ್ಣು ಹಾಕಿ ತೇಪೆ ಹಾಕಲಾಗಿತ್ತು. ಆದರೆ ಮಳೆ ಬಂದಿದ್ದೇ ತಡ, ವಾಸ್ತವಾಂಶ ಏನೆಂಬುದು ಬಟಾಬಯಲಾಗಿದೆ. ತೇವದ ಮಣ್ಣಿನ ಸೆಳೆತಕ್ಕೆ ಬೈಸಿಕಲ್, ದ್ವಿಚಕ್ರ ವಾಹನ, ಆಟೋ ಸೇರಿ ಸಣ್ಣಪುಟ್ಟ ವಾಹನಗಳು ಸಿಲುಕುತ್ತಿದ್ದು ಹೊರ ತೆಗೆಯಲು ಹೆಣಗುತ್ತಿರುವ ದೃಶ್ಯ ನಿತ್ಯವೂ ಕಾಣಸಿಗುತ್ತದೆ.
ಪಲ್ಲಕ್ಕಿ ಹೊತ್ತು ಸಾಗಲಾರದ ಸನ್ನಿವೇಶ: ಬೆಟ್ಟದ ಕೆಂಗಲ್ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ ನೆರವೇರಿಸುವ ಸಂಪ್ರದಾಯವಿದೆ. ಜತೆಗೆ ಶ್ರಾವಣ ಮಾಸದಲ್ಲಿ ಭಕ್ತರ ದಂಡೇ ಹರಿದು ಬಂದರೆ, ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವ ಭಕ್ತರ ಸಂಖ್ಯೆಗೆ ಕೊರತೆಯಿಲ್ಲ. ಅರಸೀಕೆರೆ ನಗರ ಒಳಗೊಂಡಂತೆ ನಾಗತಿಹಳ್ಳಿ, ಬೆಂಡೇಕೆರೆ, ಬಸವರಾಜಪುರ, ಹರತನಹಳ್ಳಿ, ಪುರಲೇಹಳ್ಳಿ, ಸಿದ್ದಪುರ, ಕೆ.ವೆಂಕಟಾಪುರ, ಭೈರನಾಯ್ಕನಹಳ್ಳಿ, ಕೊಂಡವಾಗಿಲು, ಕೋಡಿಹಳ್ಳಿ, ಚಿಕ್ಕಮ್ಮನಹಳ್ಳಿ ಗ್ರಾಮಸ್ಥರು ದೇವರುಗಳ ಪುಣ್ಯ ಮಾಡಿಸುವ ಕಾರ್ಯವೂ ಸನ್ನಿಧಿಯಲ್ಲಿ ನಡೆಯುತ್ತದೆ. ಮಳೆ ಸುರಿದ ವೇಳೆ ದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಲಾರದ ಸನ್ನಿವೇಶ ನಿರ್ಮಾಣಗೊಂಡಿದೆ.
ಸಂಬಂಧಿಸಿದ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಇನ್ನಾದರೂ ಇತ್ತ ಗಮನಹರಿಸಿ ಸುಸಜ್ಜಿತ ರಸ್ತೆ ನಿರ್ಮಿಸುವ ಮೂಲಕ ಈ ಭಾಗದ ಕೃಷಿಕರು ಹಾಗೂ ಬೆಟ್ಟದ ಕೆಂಗಲ್ ಸಿದ್ದೇಶ್ವರಸ್ವಾಮಿ ಸನ್ನಿಧಿಗೆ ತೆರಲುವ ಭಕ್ತರ ನೆರವಿಗೆ ಧಾವಿಸುವರೇ ಎಂಬುದನ್ನು ಕಾದು ನೋಡಬೇಕಿದೆ. ಪುರಲೇಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಕೆಲ ತಿಂಗಳ ಹಿಂದೆ ರಸ್ತೆಗೆ ಮಣ್ಣು ಹಾಕಿ ತೇಪೆ ಹಾಕಲಾಗಿದೆ. ಆದರೆ ಮಳೆಯಿಂದ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ಜಮೀನುಗಳಿಗೆ ತೆರಳಲು ಸಾಧ್ಯವಿಲ್ಲದಂತಾಗಿದೆ. ಶ್ರೀ ಕ್ಷೇತ್ರ ಕೆಂಗಲ್ ಸಿದ್ದೇಶ್ವರ ದೇಗುಲಕ್ಕೆ ತೆರಳುವ ಭಕ್ತರು ಹಾಗೂ ಕೃಷಿಕರ ಹಿತ ಮನಗಂಡು ಸುಸಜ್ಜಿತ ರಸ್ತೆ ನಿರ್ಮಿಸಲು ತಾಲೂಕು ಆಡಳಿತ ಯೋಜನೆ ರೂಪಿಸಬೇಕು.
ಸತೀಶ್ ಶ್ರೀ ಕ್ಷೇತ್ರದ ಭಕ್ತ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಸಿದ್ದಾಪುರ-ಕೆಂಗಲ್ ಸಿದ್ದೇಶ್ವರ ಬೆಟ್ಟದ ಸಂಪರ್ಕ ರಸ್ತೆಯನ್ನೊಮ್ಮೆ ನೋಡಿದರೆ, ಪರಿಸ್ಥಿತಿ ಏನೆಂಬುದು ಪ್ರತಿಯೊಬ್ಬರಿಗೂ ಗೊತ್ತಾಗುವಂತಿದೆ.
ಪುರಲೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ದೊಡ್ಡದಾಗಿದ್ದು ಅಗತ್ಯವಿರುವಷ್ಟು ಅನುದಾನ ಒದಗಿಸುವುದು ಸವಾಲಿನ ಕೆಲಸವಾಗಿದೆ. ಇದೀಗ ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿದ್ದು ರಸ್ತೆ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಿ ಸಮಸ್ಯೆ ಸರಿಪಡಿಸಲಾಗುವುದು.
ಶಾರದಾ, ಪಿಡಿಒ, ಪುರಲೇಹಳ್ಳಿ ಗ್ರಾಮ ಪಂಚಾಯಿತಿ