ಕೊಳ್ಳೇಗಾಲ: ಐದು ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸವನ್ನು ಜನರ ಮುಂದಿಟ್ಟು ಮತ್ತೊಂದು ಅವಕಾಶ ಕೊಡುವಂತೆ ಮತಯಾಚನೆ ಮಾಡುತ್ತಿದ್ದೇನೆ. ಜನರು ಈ ಬಾರಿಯೂ ನನಗೆ ಆಶೀರ್ವದಿಸುವ ವಿಶ್ವಾಸವಿದೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಹೇಳಿದರು.
ತಾಲೂಕಿನ ಕೆಂಪನಪಾಳ್ಯ, ರಕ್ಕಸನಪಾಳ್ಯ, ತಿಮ್ಮರಾಜೀಪುರ, ಜಾಗೇರಿ, ಅರೇಪಾಳ್ಯ ಗ್ರಾಮದಲ್ಲಿ ಭಾನುವಾರ ಮತಯಾಚಿಸಿ ಸಿದ್ದಯ್ಯನಪುರ ಗ್ರಾಮದಲ್ಲಿ ಮಾತನಾಡಿದರು. ನನ್ನ ಅಧಿಕಾರ ಅವಧಿಯಲ್ಲಿ ಕರೊನಾ, ಪ್ರವಾಹ ಪರಿಸ್ಥಿತಿ ಎದುರಾಯಿತು. ಇದರ ನಡುವೆ ದೊರೆತ ಸಮಯದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅಂದು ಮಾಡಿದ ಕೆಲಸವನ್ನು ಜನರಿಗೆ ತೋರಿಸಿ ಮತ ಕೇಳುತ್ತಿದ್ದೇನೆ. ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸುವ ಬಗ್ಗೆ ಪ್ರಸ್ತಾಪಿಸಿ ಮತ್ತೊಂದು ಅವಕಾಶ ಕೇಳುತ್ತಿದ್ದೇನೆ. ಆದರೆ, ಕಾಂಗ್ರೆಸ್ಸಿಗರು ಒಂದೆಡೆ ನನ್ನನ್ನು ಬಯ್ಯುತ್ತ, ಮತ್ತೊಂದೆಡೆ ಅನುಕಂಪದ ಅಡಿಯಲ್ಲಿ ಮತ ಕೇಳುತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ಫಲಿಸುವುದಿಲ್ಲ ಎಂದರು.
ಸಿದ್ದಯ್ಯನಪುರ ಗ್ರಾಮ ಪಂಚಾಯಿತಿಗೆ 7 ಕೋಟಿ ರೂ. ಅನುದಾನ ನೀಡಿದ್ದೇನೆ. ರಾಜಕಾಲುವೆ ನಿರ್ಮಾಣಕ್ಕೆ 1.50 ಕೋಟಿ ರೂ. ಕೊಟ್ಟಿದ್ದೇನೆ. ಮಹದೇಶ್ವರ ಬಡಾವಣೆಗೆ ಸಿ.ಸಿ ರಸ್ತೆ ಹಾಗೂ ಬಹುನಿರೀಕ್ಷಿತ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಜಾಗ ಗುರುತಿಸಿಕೊಟ್ಟಿದ್ದೇನೆ. ಇವೆಲ್ಲ ಕೆಲಸ ಮಾಡಿದ್ದರಿಂದಲೇ ಪ್ರಚಾರಕ್ಕೆ ಬಂದಾಗ ನನಗೆ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ ಎಂದರು.