ಜಿಲ್ಲೆ

ಈ ಬಾರಿ ಮಾವು ಬರೋದು ಲೇಟು!

Belagavi

ಬೆಳಗಾವಿ: ಪ್ರತಿ ವರ್ಷ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ದಾಂಗುಡಿ ಇಡುತ್ತಿದ್ದ ಹಣ್ಣುಗಳ ರಾಜ ಮಾವು ಈ ಬಾರಿ ಬರುವುದು ತಡವಾಗಲಿದೆ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಹಣ್ಣು ಮಾರುಕಟ್ಟೆಗೆ ಬರುವುದು ವಿಳಂಬವಾಗುತ್ತಿದೆ.

ಪ್ರತಿ ಹಂಗಾಮಿನಲ್ಲಿ ಮಾರ್ಚ್ ಮೊದಲ ವಾರದಲ್ಲಿಯೇ ಮಾವಿನ ಹಣ್ಣುಗಳ ಸುಗ್ಗಿ ಶುರುವಾಗುತ್ತಿತ್ತು. ಆದರೆ, ಈ ವರ್ಷ ಮಾರ್ಚ್‌ನಲ್ಲೂ ಫಸಲು ಮಿಡಿ ಹಂತದಲ್ಲಿದ್ದು, ಮಾಗುವ ಹಂತಕ್ಕೆ ತಲುಪಿಲ್ಲ. ಹಾಗಾಗಿ, ಮೇ ಮೊದಲ ವಾರದಲ್ಲಿ ಮಾವು ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಮತ್ತೊಂದೆಡೆ ಮಾಗಿದ ಮಾವು ಮಾರಾಟವಾಗಿಬೇಕಿದ್ದ ಸ್ಥಳದಲ್ಲಿ ಇದೀಗ ಮಿಡಿ ಮಾವಿನ ಕಾಯಿ ಮಾರಾಟವಾಗುತ್ತಿವೆ.

ರಾಜ್ಯದಲ್ಲಿ ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ ಜಿಲ್ಲೆ ಸೇರಿ ವಿವಿಧ ಕಡೆ 2 ಲಕ್ಷ ಹೆಕ್ಟೇರ್ ಮಾವು ಬೆಳೆಯುವ ಪ್ರದೇಶವಿದೆ. ಅದರಲ್ಲಿ ಪ್ರಸಕ್ತ ವರ್ಷ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಆದರೆ, ಈ ವರ್ಷ ಮಾವು ಹೂ ಬಿಡುವ ಸಂದರ್ಭದಲ್ಲಿ ಉಂಟಾದ ಹವಾಮಾನ ವೈಪರೀತ್ಯ ಹಾಗೂ ಕಾಯಿ ಮಾಗುವ ಹಂತದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಶೇ.28 ಪ್ರದೇಶದಲ್ಲಿ ಮಾವು ಹಾನಿಯಾಗಿದೆ.

ಪ್ರತಿ ವರ್ಷ ರಾಜ್ಯದಲ್ಲಿ ಬಾದಾಮಿ, ತೊತಾಪುರಿ, ಮಲ್ಲಿಕಾ, ರಸಪುರಿ, ನೀಲಂ, ಆಪೂಸ್ (ಆಲ್ಫಾನ್ಸೋ), ಕಲಮಿ ಸೇರಿ ವಿವಿಧ ತಳಿಯ 12 ರಿಂದ 15 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತದೆ. ಆದರೆ, ಈ ಬಾರಿ ಮಾವಿನ ಉತ್ಪಾದನೆ ಕುಸಿದಿದ್ದು, 5 ರಿಂದ 6 ಲಕ್ಷ ಟನ್ ಮಾವಿನ ಹಣ್ಣು ಇಳುವರಿ ಬರುವ ಸಾಧ್ಯತೆಯಿದೆ. ನಿರೀಕ್ಷಿತ ಪ್ರಮಾಣದಲ್ಲಿ ಸಗಟು ಮಾರುಕಟ್ಟೆಗಳಿಗೆ ಮಾವಿನ ಹಣ್ಣು ಬರುವುದಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮಾವಿನ ಹಣ್ಣಿನ ವ್ಯಾಪಾರಿಗಳು ತಿಳಿಸಿದ್ದಾರೆ.

ಹೆಕ್ಟೇರ್‌ಗೆ 3 ರಿಂದ 4 ಟನ್ ಇಳಿಕೆ!: ಉತ್ತಮ ಇಳುವರಿ ಬಂದರೆ ಹೆಕ್ಟೇರ್‌ಗೆ ಸರಾಸರಿ 8 ರಿಂದ 10 ಟನ್ ಮಾವು ಇಳುವರಿ ಬರುತ್ತದೆ. ಅಕಾಲಿಕ ಮಳೆ, ರೋಗ ಬಿದ್ದರೆ ಹಾಗೂ ಹವಾಮಾನದಲ್ಲಿ ವೈಪರೀತ್ಯ ಉಂಟಾದರೆ ಹೆಕ್ಟೇರ್ ಸರಾಸರಿ 5 ರಿಂದ 6 ಟನ್‌ವರೆಗೆ ಇಳುವರಿ ಬರುತ್ತದೆ. ಆದರೆ, ಈ ವರ್ಷ ಮಾವಿನ ಗಿಡಗಳು ಹೂ ಬಿಡುವ ಸಂದರ್ಭದಲ್ಲಿ ರೋಗ ಬಂದಿದ್ದರಿಂದ ಕಾಯಿ ಹಿಡಿದಿಲ್ಲ. ಅಕಾಲಿಕ ಮಳೆಯಿಂದಾಗಿ ಮಾಗುವ ಹಂತದಲ್ಲಿಯೇ ಕಾಯಿಗಳು ಹಾಳಾಗಿವೆ. ಹಾಗಾಗಿ, ಈ ಬಾರಿ ಪ್ರತಿ ಹೆಕ್ಟೇರ್ ಸರಾಸರಿ 3 ರಿಂದ 4 ಟನ್ ಇಳುವರಿ ಕಡಿಮೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ರಾಜ್ಯದಲ್ಲಿ ಪ್ರತಿ ವರ್ಷ 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 12 ರಿಂದ 15 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತದೆ. ಆದರೆ, ಈ ವರ್ಷ ಹವಾಮಾನ್ಯ ವೈಪರೀತ್ಯದಿಂದಾಗಿ ಉತ್ಪಾದನೆ ಪ್ರಮಾಣ ಕುಸಿದಿದೆ. ಮಾರುಕಟ್ಟೆಗೆ 5 ರಿಂದ 6 ಲಕ್ಷ ಟನ್ ಮಾವು ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಈ ಬಾರಿ ರೈತರಿಗೆ ಉತ್ತಮ ದರವೂ ಸಿಗಲಿದೆ.|ಡಾ.ಎಚ್.ವಿ.ಹಿತ್ತಲಮನಿ ಮಾವು ತಜ್ಞ, ನಿವೃತ್ತ ಹೆಚ್ಚುವರಿ ನಿರ್ದೇಶಕ ತೋಟಗಾರಿಕೆ ಇಲಾಖೆಈ ವರ್ಷ ಮಾವು ಹೂ ಬಿಡುವುದು ತಡವಾಗಿದ್ದರಿಂದ ಹಣ್ಣು ಮಾರುಕಟ್ಟೆಗೆ ಬರುವುದು ಒಂದು ತಿಂಗಳು ವಿಳಂಬವಾಗಲಿದೆ. ಉತ್ತಮ ಇಳುವರಿ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪ್ರತಿ ಹೆಕ್ಟೇರ್‌ಗೆ 10 ಟನ್ ಮಾವು ಉತ್ಪಾದನೆಯಾಗಲಿದೆ.|ಮಹಾಂತೇಶ ಮುರಗೋಡ ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ