ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಮಾನವ ಮತ್ತು ಪ್ರಕೃತಿ ಸೌಹಾರ್ದತೆಯ ಮಹತ್ವ ಸಾರುವ ಸ್ತಬ್ಧಚಿತ್ರ ಅನಾವರಣಗೊಳ್ಳಲಿದೆ...!
ಚಾಮರಾಜನಗರ ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಲಿರುವ ಈ ಬಾರಿಯ ಸ್ತಬ್ಧಚಿತ್ರಕ್ಕೆ ‘ಪ್ರಕೃತಿಯ ಸೌಹಾರ್ದತೆಯೊಂದಿಗೆ ಪ್ರಗತಿಯತ್ತಾ ಸಾಗೋಣ...’ ಎಂಬ ವಿಷಯವನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಈ ಮೂಲಕ ಇತ್ತೀಚೆಗೆ ದೇಶದಲ್ಲೇ ಸುದ್ದಿಯಾದ ಹುಲಿಗಳ ಸಾವು, ಆಗಾಗ ಸುದ್ದಿಯಾಗುತ್ತಲೇ ಇರುವ ವನ್ಯಪ್ರಾಣಿಗಳ ಸಾವು, ಅರಣ್ಯ ನಾಶವಾಗದಂತೆ ನೋಡಿಕೊಳ್ಳುವಲ್ಲಿ ಮನುಷ್ಯ ಜೀವಿಯ ಪಾತ್ರವೂ ಪ್ರಮುಖವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ವಿಷಯವನ್ನು ಈ ಸ್ತಬ್ಧಚಿತ್ರದಲ್ಲಿ ಅಡಕ ಮಾಡಲಾಗಿದೆ.
ಅರಣ್ಯ ಮತ್ತು ಮಾನವನ ಸಹಬಾಳ್ವೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಲು ಹೊರಟಂತಿರುವ ಅದ್ಭುತವಾದ ಸ್ತಬ್ಧಚಿತ್ರವನ್ನು ಅಧಿಕಾರಿಗಳು ಆಯ್ಕೆ ಮಾಡಿದ್ದಾರೆ. ಜಿಲ್ಲೆಯ ಚಿತ್ರಮಾಂತ್ರಿಕರು ಎಂದೇ ಗುರುತಿಸುವ ಹಿರಿಯ ಚಿತ್ರಕಲಾವಿದ ಹನೂರು ಮಹದೇವ್ ಅವರ ಮಾರ್ಗದರ್ಶನದಲ್ಲಿ ಜೀವಪರ ಚಿತ್ರಕಲಾವಿದ ಮಧುಸೂಧನ್ ಹೊಸೂರು ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಕೂತೂಹಲವನ್ನು ಹುಟ್ಟುಹಾಕಿದ್ದು, ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಜಿಲ್ಲೆಯ ಅರಣ್ಯ ಮತ್ತು ಮಾನವನ ಸೌಹಾರ್ದತೆಯ ನಡೆ ಅನಾವರಣಗೊಳ್ಳಲಿದೆ.
ಸ್ತಬ್ಧಚಿತ್ರದಲ್ಲಿ ಏನಿರಲಿದೆ:
ಈ ಸಾಲಿನ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಚಾಮರಾಜನಗರ ಜಿಲ್ಲಾ ಪಂಚಾಯಿತಿ ವತಿಯಿಂದ ಆಯ್ಕೆ ಮಾಡಿರುವ ಸ್ತಬ್ಧಚಿತ್ರದ ಮುಂಭಾಗದಲ್ಲಿ ಬೃಹತ್ ಅರಣ್ಯ ದೇವಿಯ ಸ್ತಬ್ಧಚಿತ್ರವಿರಲಿದೆ. ಅರಣ್ಯ ದೇವಿಯ ಕೂದಲನ್ನು ಬೇರಿನಂತೆ, ಮರಗಳ ಹೂ, ಹಣ್ಣು, ರೆಂಬೆಕೊಂಬೆಗಳಂತೆ ಚಿತ್ರಿಸಲಾಗಿದೆ. ಅದರ ತಳಭಾಗದಲ್ಲೇ ಜಿಂಕೆ ಮತ್ತು ನವಿಲಿನ ಸ್ತಬ್ಧಚಿತ್ರಗಳು ಇರಲಿದೆ. ಅರಣ್ಯದ ಭಾಗವನ್ನು ಒಂದು ಕೈ ರೂಪದಲ್ಲಿ ಮತ್ತು ಜಿಲ್ಲೆಯಲ್ಲಿ ಕರ್ಖಾನೆಗಳು ಅಭಿವೃದ್ಧಿಹೊಂದುತ್ತಿರುವ ಸ್ತಬ್ಧಚಿತ್ರವನ್ನು ಒಂದು ಕೈರೂಪದಲ್ಲಿ ಚಿತ್ರಿಸಿ ಹಸ್ತಲಾಘವ ಮಾಡುತ್ತಿದ್ದು, ಪ್ರಕೃತಿ ಮತ್ತು ಮಾನವನ ಸೌಹಾರ್ದತೆಯ ಮಹತ್ವವನ್ನು ಹೇಳುವಂತಿದೆ. ಅರಣ್ಯದ ಕೈಮೇಲೆ 3 ಹುಲಿಗಳು ನಡೆದುಕೊಂಡು ಹೋಗುವಂತೆ ಚಿತ್ರಿಸಿದ್ದು, ಹುಲಿಗಳ ರಕ್ಷಣೆಯ ಮಹತ್ವವನ್ನು ಸಾರುತ್ತಿದೆ. ಸ್ತಬ್ಧಚಿತ್ರದ ಬಲಭಾಗದಲ್ಲಿ ಭರಚುಕ್ಕಿ ಜಲಪಾತ, ಕಾಟಿ, ಸೂರ್ಯಕಾಂತಿ ಬೆಳೆಯುತ್ತಿರುವ ಕೃಷಿಕರ ಸ್ತಬ್ಧಚಿತ್ರಗಳು ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯ ಮತ್ತು ಸಿಮ್ಸ್ ಆಸ್ಪತ್ರೆಯ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಎಡಭಾಗದಲ್ಲಿ ಆನೆಗಳ ಹಿಂಡು, ಜಾನಪದ ಕಲಾಪ್ರಕಾರಗಳಾದ ಗೊರವರ ಕುಣಿತ ಮತ್ತು ಕಂಸಾಳೆ ಕಲಾವಿದರ ಸ್ತಬ್ಭಚಿತ್ರ ಹಾಗೂ ಜಿಲ್ಲಾಡಳಿತ ಭವನ, ಸಕರ್ಅರಿ ಇಂಜಿನಿಯರಿಂಗ್ ಕಾಲೇಜಿನ ಚಿತ್ರಗಳು ಇರಲಿದೆ. ಈ ಮೂಲಕ ಮಾನವ ಮತ್ತು ಪ್ರಾಣಿ ಸಂಘರ್ಷವನ್ನು ತಪ್ಪಿಸಿ, ಸಹಬಾಳ್ವೆ ಮೂಡಿ ಪ್ರಗತಿ ಕಡೆ ಎಲ್ಲರೂ ಮುಖಮಾಡಲಿ ಎಂದು ಆಶಾಭಾವನೆಯನ್ನು ಸ್ತಬ್ಭಚಿತ್ರ ಹೇಳುತ್ತಿದೆ.
ಪ್ರಶಸ್ತಿ ತರುವ ಕಲಾವಿದರು:
ಜಿಲ್ಲೆಯ ಸ್ತಬ್ಧಚಿತ್ರ ನಿರ್ಮಾಣದಲ್ಲಿ ಪ್ರತಿವದಂತೆ ಈ ವರ್ಷವೂ ಪ್ರತಿಭಾವಂತ ಕಲಾವಿದರು ತೊಡಗಿಕೊಳ್ಳುತ್ತಿದ್ದಾರೆ. ಹಿರಿಯ ಚಿತ್ರಕಲಾವಿದ ಮಂಗಲ ಮಹದೇವ್ ಅವರ ಮಾರ್ಗದರ್ಶನದಲ್ಲಿ ಜೀವಪರ ಚಿತ್ರಮಾಂತ್ರಿಕ ಮಧುಸೂದನ್ ಹೊಸೂರು ಮತ್ತು ತಂಡದವರು ಸ್ತಬ್ಧಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದೆ ದಸರಾ ಮೆರವಣಿಗೆಯಲ್ಲಿ ನಿರ್ಮಿಸಿದ್ದ ಬೆಟ್ಟದ ಸಾಲುಗಳು ಮತ್ತು ಜನಪದ ವೈದ್ಯಪದ್ಧತಿ, ಪ್ರವಾಸಿ ತಾಣಗಳು, ಪ್ರಕೃತಿ ಮಡಿಲಿನ ಆಧ್ಯಾತ್ಮಿಕ ಪುಣ್ಯ ಕ್ಷೇತ್ರಗಳು, ಸಮೃದ್ಧ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ ಇತರೆ ಸ್ತಬ್ಧಚಿತ್ರಗಳು ಪ್ರಶಸ್ತಿಯನ್ನು ಬಾಚಿಕೊಂಡಿದ್ದವು. 2022 ರಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಸ್ತಬ್ಧಚಿತ್ರ ಎಲ್ಲರ ಮನಗೆದ್ದಿತ್ತು. ಇಂತಹ ಕಲಾವಿದರ ತಂಡ ಈ ಬಾರಿ ಅರಣ್ಯ, ವನ್ಯಜೀವಿಗಳು ಹಾಗೂ ಮಾನವ ಸಹಬಾಳ್ವೆಯ ಪಾಠವನ್ನು ಹೇಳಲು ಹೊರಟಿರುವುದು ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಈ ಬಾರಿ ಪ್ರಶಸ್ತಿ ಬಂದರೇ ಹ್ಯಾಟ್ರಿಕ್:
2023 ರಲ್ಲಿ ನಡೆದ ಮೈಸೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆಯ ಜಾನಪದ ಭಕ್ತಿಯ ಬೀಡು, ಹುಲಿ ಆನೆಗಳ ಸಂತೃಪ್ತಿಯ ತಾಣ ಎಂಬ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಬಂದಿತ್ತು. 2024 ರಲ್ಲಿ ನಡೆದ ಮೈಸೂರು ದಸರಾ ಜಂಬೂಸವಾರಿಯಲ್ಲಿ ಜಿಲ್ಲೆಯ ಸೋಲಿಗರ ಸೊಬಗು ಒಮ್ಮೆ ನೀ ಬಂದು ನೋಡು ಎಂಬ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಬಂದಿತ್ತು. ಈ ಬಾರಿಯ ಮೈಸೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆಯ ಸ್ತಬ್ಧಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡರೇ, ಹ್ಯಾಟ್ರಿಕ್ ಪ್ರಶಸ್ತಿ ಬಂದಂತಾಗುತ್ತಿದೆ. ಈ ನಿಟ್ಟಿನಲ್ಲಿ ಬಹಳ ಶ್ರಮವಹಿಸಿ, ಆಕರ್ಷಕವಾಗಿ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡಲು ಕಲಾವಿದರು ಶ್ರಮಿಸುತ್ತಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳು ಕೂಡ ಪೂರಕವಾದ ಬೆಂಬಲವನ್ನು ನೀಡುತ್ತಿದ್ದಾರೆ.
ಹಲವರು ವರ್ಷಗಳಿಂದ ಸ್ತಬ್ಧಚಿತ್ರ ತಯಾರಿಸುವ ಕೆಲಸ ಮಾಡುತ್ತಿದ್ದೇವೆ. ಅದರಂತೆ ಕಳೆದ 2 ವಗಳು ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ಸಂದಿದೆ. ಈ ಬಾರಿಯೂ ನಿರೀಕ್ಷೆ ಹೆಚ್ಚಾಗಿದ್ದು, ನಮ್ಮ ಜಿಲ್ಲೆಯ ಪ್ರಕೃತಿ ಸೌಂದರ್ಯ, ವನ್ಯಜೀವಿಗಳು, ಪ್ರವಾಸಿತಾಣಗಳು, ಜಾನಪದ ಕಲೆಗಳು ಹಾಗೂ ಇನ್ನಿತರೆ ಸ್ಥಳಗಳ ಸ್ತಬ್ಧಚಿತ್ರ ತಯಾರಿಸುವುದೇ ಹೆಮ್ಮೆ ಎನಿಸುತ್ತದೆ.
-ಎಸ್.ಮಧುಸೂದನ್, ಚಿತ್ರ ಹಾಗೂ ಶಿಲ್ಪಕಲಾವಿದ, ಚಾಮರಾಜನಗರ