ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಹೇಶ ಟೆಂಗಿನಕಾಯಿ ಮಾತನಾಡಿದರು. ಎಂ.ಬಿ.ಝಿರಲಿ, ಶಶಿಕಾಂತ ಪಾಟೀಲ, ರಮೇಶ ದೇಶಪಾಂಡೆ ಮತ್ತಿತರರು ಇದ್ದರು. 
ಜಿಲ್ಲೆ

ಈ ಬಾರಿ ಪಾಲಿಕೆಯಲ್ಲಿ ಬಿಜೆಪಿಯದ್ದೇ ಅಧಿಕಾರ

ಬೆಳಗಾವಿ: ಎರಡೂವರೆ ದಶಕದ ಬಳಿಕ ಬೆಳಗಾವಿ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆ, ಸ್ವಂತ ಬಲದ ಮೇಲೆ ಎದುರಿಸಲು ಸಂಕಲ್ಪ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 25 ವರ್ಷಗಳಿಂದ ಕಾರ್ಯಕರ್ತರು ಪಕ್ಷದ ಚಿಹ್ನೆ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸಲು ಬೇಡಿಕೆಯಿಟ್ಟಿದ್ದರು. ಆದರೆ, ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ವರಿಷ್ಠರ ಸೂಚನೆ ಮತ್ತು ಕಾರ್ಯಕರ್ತರ ಬೇಡಿಕೆಯಂತೆ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯಡಿ ಎದುರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪಾಲಿಕೆ ಚುನಾವಣೆಯಲ್ಲಿ ಭಾಷೆ, ಜಾತಿ, ಗಡಿ ವಿಷಯಗಳಿಗಿಂತ ಈ ಭಾರಿ ರಾಷ್ಟ್ರೀಯತೆ, ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಎದುರಿಸಲು ಪಕ್ಷ ಸಿದ್ಧತೆ ಮಾಡಿಕೊಂಡಿದೆ. ಚುನಾವಣೆಯಲ್ಲಿ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಮುಖಂಡರು ಭಾಗವಹಿಸಲಿದ್ದಾರೆ.
ಅಲ್ಲದೆ, ಪಾಲಿಕೆಯ ಕಟ್ಟಡದ ಮೇಲೆ ಪಕ್ಷದ ಧ್ವಜ ಹಾರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ವಕ್ತಾರ ಎಂ.ಬಿ.ಝಿರಲಿ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ 100 ಕೋಟಿ ರೂ. ಅನುದಾನ ನೀಡಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆ ಪಟ್ಟಿಯಲ್ಲಿ ಬೆಳಗಾವಿ ಸೇರ್ಪಡೆಯಾಗಿದೆ. ಕಾರ್ಯಕರ್ತರು ಬಹು ವರ್ಷಗಳ ಬೇಡಿಕೆಯಂತೆ ಈ ಬಾರಿ ಪಕ್ಷದ ಚಿಹ್ನೆ ಅಡಿಯಲ್ಲಿ ಪಾಲಿಕೆ ಎದುರಿಸುತ್ತಿದ್ದೇವೆ. ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯೇ ನಮ್ಮ ಅಜೆಂಡಾ ಆಗಿದೆ ಎಂದರು.

ಬಿಜೆಪಿ ನಗರದ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಚುನಾವಣೆ ಉಸ್ತುವಾರಿ ರಮೇಶ ದೇಶಪಾಂಡೆ, ಪ್ರಕಾಶ ಅಕ್ಕಲುಕೋಟೆ, ಉಜ್ವಲಾ ಬಡವನಾಚೆ, ಪಾಂಡುರಂಗ ಧಾಮನೇಕರ ಮತ್ತಿತರರು ಇದ್ದರು.