ಜಿಲ್ಲೆ

ಈ ಬಾರಿ ಚಾ.ನಗರ ದಸರಾವಿಲ್ಲ ‌

ಎ.ಎಸ್.ಮಣಿಕಂಠ
*ಮೈಸೂರಿಗೆ ಬನ್ನಿ ಎಂದ ಸಿಎಂ ಸಿದ್ದರಾಮಯ್ಯ 
*ಜಿಲ್ಲೆಯ ಜನತೆಗೆ ನಿರಾಶೆ 
ಚಾಮರಾಜನಗರ: ಮೈಸೂರು ಜಿಲ್ಲೆಯ ಭಾಗವೇ ಆಗಿದ್ದ ಚಾಮರಾಜನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆರಂಭಿಸಿದ್ದ ದಸರಾ ಮಹೋತ್ಸವ, ಈ ಬಾರಿ ನಡೆಯುತ್ತಿಲ್ಲ.
ಮೈಸೂರಿನಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದ ನಾಡಹಬ್ಬ ದಸರಾವನ್ನು ಸುತ್ತಮುತ್ತಲಿನ ಜಿಲ್ಲೆಗಳಿಗೂ ವಿಸ್ತರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ 2013 ರಲ್ಲಿ ಅವಿಭಜಿತ ಚಾಮರಾಜನಗರ ಜಿಲ್ಲೆಯಲ್ಲೂ ದಸರಾ ಮಹೋತ್ಸವವನ್ನು ಶುರು ಮಾಡಿತ್ತು. ಅದರಂತೆ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ಕವಿಗೋಷ್ಠಿ, ರೈತ ದಸರಾ, ದಸರಾ ಗ್ರಾಮೀಣ ಕ್ರೀಡಾಕೂಟ, ಪಾರಂಪರಿಕ ನಡಿಗೆ, ಆಹಾರ ಮೇಳ ಹಾಗೂ ಇನ್ನಿತರೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಸಲಾಗುತ್ತಿತ್ತು.
ಕಳೆದ ವರ್ಷವೂ ಅ.7 ರಿಂದ 9 ವರೆಗೆ ವಿಜೃಂಭಣೆಯಿಂದ ಚಾಮರಾಜನಗರ ದಸರಾ ಮಹೋತ್ಸವ ಆಚರಣೆ ಮಾಡಲಾಗಿತ್ತು.
ಆದರೇ ಈ ಬಾರಿಯ ಮೈಸೂರು ದಸರಾ ಮಹೋತ್ಸವ ಆಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಚಾಮರಾಜನಗರದಲ್ಲಿ ಈ ಬಾರಿ ದಸರಾ ಆಚರಣೆ ಮಾಡಲ್ಲ ಎಂಬುವುದರ ಮೂಲಕ ಜಿಲ್ಲೆಯ ಜನತೆಗೆ ನಿರಾಶೆ ಮೂಡಿಸಿದ್ದಾರೆ. ಈ ಮೂಲಕ ಅವರೇ ಪ್ರಾರಂಭಿಸಿದ್ದ ದಸರಾ ಮಹೋತ್ಸವಕ್ಕೆ, ಅವರೇ ತೆರೆ ಎಳೆದಂತಾಗಿದೆ. ಈ ಸಂಬಂಧ ಸಾರ್ವಜನಿಕ ವಲಯದಲ್ಲೂ ಚರ್ಚೆಯಾಗುತ್ತಿದ್ದು, ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.