ಜಿಲ್ಲೆ

ಈ ಬಾರಿ ಎಂಪಿ ಸ್ಥಾನ ಗೆಲ್ಲದಿದ್ದರೆ ಮತ್ತೆ ಯಾವತ್ತು ಕಾಂಗ್ರೆಸ್ ಗೆಲ್ಲುವುದಿಲ್ಲ:ಸಚಿವ ರಾಜಣ್ಣ

Hassan - Ramesh H R

ಹಾಸನ: ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದು, ಅವೆಲ್ಲವನ್ನ ಬದಿಗಿಟ್ಟು ಒಗ್ಗಟ್ಟಿನಿಂದ ಚುನಾವಣೆ ಮಾಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳದಿದ್ದರೆ, ಜಿಲ್ಲೆಯಲ್ಲಿ ಮುಂದೆ ಯಾವತ್ತೂ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು
ನೂತನವಾಗಿ ಗೃಹ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಭಾನುವಾರ ನಗರದ ತಾಲೂಕು ಪಂಚಾಯಿತಿ ರಸ್ತೆಯಲ್ಲಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಭಿನ್ನಾಭಿಪ್ರಾಯಗಳು ಸರ್ವೇಸಾಮಾನ್ಯ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸುವ ಸಂಕಲ್ಪವನ್ನು ಈ ಕಾರ್ಯಕ್ರಮದ ಮೂಲಕ ಮಾಡಬೇಕು ಎಂದು ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು
ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಮತ್ತು ಬೋಸ್ ಮತ್ತು ವಲ್ಲಬಾಯ್ ಪಟೇಲ್ ಅವರಿಗೂ ಕೂಡ ವ್ಯತ್ಯಾಸಗಳಿತ್ತು. ಆದರೆ ಅವರು ದೇಶಕ್ಕೆ ಸ್ವಾತಂತ್ರ್ಯ ತರಬೇಕು ಎಂಬ ಗುರಿ ಅವರಲ್ಲಿತ್ತು. ಅದೇ ರೀತಿ ಹಾಸನದಲ್ಲಿ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಚುನಾವಣೆ ಗೆಲುವ ಗುರಿ ಇಟ್ಟುಕೊಂಡು ಅಭ್ಯರ್ಥಿಯನ್ನ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸಬೇಕು ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನ ಕೊರತೆಯಿಂದ ಹಾಸನದಲ್ಲಿ ಕೆಲ ಸ್ಥಾನಗಳನ್ನ ಕಳೆದುಕೊಂಡಿದ್ದೇವೆ.ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯ, ಮನಸ್ತಾಪ ಇರಬಹುದು. ಆದರೆ, ಚುನಾವಣೆ ಬಂದ ಸಂದರ್ಭದಲ್ಲಿ ನಾವೆಲ್ಲರೂ ಅದನ್ನ ಮರೆತು ಪಕ್ಷಕ್ಕಾಗಿ ಕೆಲಸ ಮಾಡಬೇಕು ಇಲ್ಲವಾದರೆ ಪಕ್ಷಕ್ಕೆ ಬಾರಿ ಹಿನ್ನೆಲೆ ಉಂಟಾಗುತ್ತದೆ ಎಂದು ಹೇಳಿದರು.
ನನ್ನ ಮತ್ತು ಮಾಜಿ ಸಚಿವ ಬಿ.ಶಿವರಾಂ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿದೆ. ಆದರೆ ಇದೆಲ್ಲವನ್ನ ಮರೆತು ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗಿಯಾಗಿದ್ದೇವೆ. ಆದ್ದರಿಂದ ಜಿಲ್ಲೆಯ ಎಲ್ಲಾ ಮುಖಂಡರು ಒಂದೇ ವೇದಿಕೆಯಲ್ಲಿದ್ದೀರಾ ಇದೆ ಸಂದೇಶ ಜಿಲ್ಲೆಗೆ ಹೋಗಬೇಕು ಒಗ್ಗಟ್ಟಿನಿಂದ ಚುನಾವಣೆ ಗೆಲ್ಲುತ್ತೆವೆ ಎಂಬ ಸಂದೇಶವನ್ನ ರಾಜ್ಯಕ್ಕೆ ರವಾನಿಸಿ ಎಂದರು.
ಈ ಬಾರಿ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರದಲ್ಲಿ 20 ಸ್ಥಾನ ಗೆಲ್ಲದಿದ್ದರೆ ಜನರ ಮುಂದೆ ಮುಖ ತೋರಿಸಿಕೊಂಡು ಹೋಗಲು ಸಾಧ್ಯವಿಲ್ಲ ಜನರು ಮತ್ತು ಕಾರ್ಯಕರ್ತರು ಸರ್ಕಾರವನ್ನ ಹೇಗೆ ನಡೆಸುತ್ತೀರಾ ಎಂದು ಪ್ರಶ್ನಿಸಿದರೆ ನಮಗೆ ಉತ್ತರಿಸಲು ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ಹಾಸನ ಸೇರಿದಂತೆ ಅತಿ ಹೆಚ್ಚು ಸ್ಥಾನ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ನುಡಿದಂತೆ ನಡೆದುಕೊಂಡಿದ್ದೇವೆ ಐದು ಗ್ಯಾರಂಟಿಗಳನ್ನ ಈಡೇರಿಸಿದ್ದೇವೆ. ಈ ಯೋಜನೆಗಳು ಎಲ್ಲಾ ವರ್ಗದ ಜನರಿಗೂ ಕೂಡ ತಲುಪಿದೆ. ಕೆಲವು ಸಣ್ಣಪುಟ್ಟ ಲೋಪದಿಂದಾಗಿ ಕೆಲವರಿಗೆ ತಲುಪಲು ಸಾಧ್ಯವಾಗಿಲ್ಲ, ಇನ್ನೊಂದು ತಿಂಗಳದಲ್ಲಿ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೂತನ ಗೃಹ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಂತಹ ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈ.ಎಚ್. ಲಕ್ಷ್ಮಣ್, ಮಾಜಿ ಸಚಿವ ಬಿ.ಶಿವರಾಂ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮುಖಂಡರಾದ ಶ್ರೇಯಸ್ ಪಟೇಲ್, ಶ್ರೀಧರ್ ಗೌಡ, ಮುರುಳಿ ಮೋಹನ್, ರಾಮಚಂದ್ರ, ಬಾಗೂರು ಮಂಜೇಗೌಡ, ತಾರಾ ಚಂದನ್, ಬನವಾಸಿ ರಂಗಸ್ವಾಮಿ ಸೇರಿದಂತೆ ಇನ್ನಿತರದಿದ್ದರು.

ಇತಿಹಾಸ ಸೃಷ್ಟಿಯಾಗಬೇಕು:

ಅಜಾತಶತ್ರು,ಮಾಜಿ ಸಚಿವ ಹೆಚ್.ಸಿ. ಶ್ರೀಕಂಠಯ್ಯ ಅವರ ನಂತರದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಆ ವ್ಯಕ್ತಿ ಎಂದು ಕೂಡ ಯಾರನ್ನು ದ್ವೇಷ ಮಾಡಿಲ್ಲ. ಎಲ್ಲರನ್ನ ಒಗ್ಗೂಡಿಸುವ ಕೆಲಸ ಮಾಡಿಕೊಂಡು ಹೋಗಿದ್ದರು. ಅದೇ ರೀತಿ ಈಗ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿಯಾಗಬೇಕು. ಈ ಬಾರಿ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಮೂಲಕ ವಿಜಯಪತಾಕೆಯನ್ನು ಹಾರಿಸಬೇಕು ಎಂದು ಹೇಳಿದರು

ಶಿವಲಿಂಗೇಗೌಡರು ಮಂತ್ರಿ ಆಗುವುದು ಖಚಿತ:
ಅರಸೀಕೆರೆ ಅಂತಹ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿರುವ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಕೈ ತಪ್ಪಿದೆ ಮುಂದಿನ ದಿನಗಳಲ್ಲಿ ಅವರು ನೂರಕ್ಕೆ ನೂರರಷ್ಟು ಸಚಿವರಾಗಿ ಹಾಸನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬರುವುದು ನಿಶ್ಚಿತ ಎಂದು ಕೆ.ಎನ್. ರಾಜಣ್ಣ ಭವಿಷ್ಯ ನುಡಿದರು.
ಶಿವಲಿಂಗೇಗೌಡರು ಗ್ರಾಮೀಣ ಭಾಗದ ಜನರ ಸಮಸ್ಯೆಯನ್ನು ಇಟ್ಟುಕೊಂಡು ಸದನದಲ್ಲಿ ಚರ್ಚೆ ಮಾಡುತ್ತಾರೆ. ಅವರು ಕ್ಷೇತ್ರದಲ್ಲಿ ಗಳಿಸಿರುವ ಪ್ರೀತಿ, ವಿಶ್ವಾಸ ಮತ್ತು ಅವರ ಕೆಲಸದಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ ಅವರಿಗೆ ಈಗ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಮುಂದೆ ಅವರು ಸಚಿವರಾಗುತ್ತಾರೆ ಎಂದರು. ಕೆಂಪೇಗೌಡ ಜಯಂತಿ ನಡೆದ ಸ್ಥಳದಲ್ಲಿ ಮತ್ತೊಬ್ಬ ಕೆಂಪೇಗೌಡರಿಗೆ ಸನ್ಮಾನ ಮಾಡಲಾಗುತ್ತಿದೆ ಎಂದು ಬಣ್ಣಿಸಿದರು.