ಕೊಳ್ಳೇಗಾಲ ತಾಲೂಕು ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಗದ್ದುಗೆಗೆ ಬುಧವಾರ ಪೂಜೆ ಸಲ್ಲಿಸಿದ ಶಾಸಕ ಎನ್. ಮಹೇಶ್ ಚುನವಾಣಾ ಪ್ರಚಾರ ಕಾರ್ಯ ಪ್ರಾರಂಭಿಸಿದರು. ಮುಖಂಡರಾದ ಲೋಕೇಶ್, ಗಣೇಶ್ ಮೂರಾರಿ, ಸಿದ್ದಪ್ಪಾಜಿ, ಕವಿತಾ ಇದ್ದರು. 
ಜಿಲ್ಲೆ

ಈ ಬಾರಿ ಇತಿಹಾಸ ಸೃಷ್ಟಿಸಲಿದೆ ಬಿಜೆಪಿ

ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸುತ್ತದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.

ತಾಲೂಕಿನ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ಬುಧವಾರ ಪೂಜೆ ಸಲ್ಲಿಸಿ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸಿದ್ದಪ್ಪಾಜಿ ನನ್ನ ಮನೆ ದೇವರು. ಈ ಹಿನ್ನೆಲೆಯಲ್ಲಿ ಗದ್ದುಗೆಗೆ ಪೂಜೆ ಸಲ್ಲಿಸಿ ಮತಯಾಚನೆ ಮಾಡಲು ಮುಂದಾಗಿದ್ದೇನೆ. ಇನ್ನೆರಡು ದಿನದಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗಲಿದೆ ಎಂದರು.

ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕರೊನಾ ಸೇರಿದಂತೆ ರಾಜಕೀಯ ಏಳು-ಬೀಳುಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಆದರೂ ಅದನ್ನೆಲ್ಲ ಮೆಟ್ಟಿನಿಂತು ಕೆಲಸ ಮಾಡಿದ್ದೇನೆ. ಇದನ್ನು ಮಹಾಜನತೆ ಮರೆತಿಲ್ಲ ಎಂದರು.

ಅಭಿವೃದ್ಧಿಗಾಗಿ ಪ್ರಬುದ್ಧ ಜನತೆ ನನಗೊಂದು ಅವಕಾಶ ನೀಡಲಿದ್ದಾರೆ. ಟಗರಪುರ, ಕುಂತೂರು, ಮುಳ್ಳೂರು ಈ ಮೂರು ಪಂಚಾಯಿತಿಗಳಲ್ಲಿ ಪ್ರಚಾರ ಜೋರಾಗಿ ನಡೆಯಲಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದಡಿ ನಾನು ಕೆಲಸ ಮಾಡುತ್ತಿದ್ದೇನೆ. ಈ ವಿಚಾರದಲ್ಲಿ ಎಂತಹ ಸಂದರ್ಭದಲ್ಲೂ ವಿಚಲಿತನಾಗುವುದಿಲ್ಲ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕೊತ್ತನೂರು ಗ್ರಾಮದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆಗೆ ಎನ್.ಮಹೇಶ್ ಮಾಲಾರ್ಪಣೆ ಮಾಡಿದರು. ಗ್ರಾಮಾಂತರ ಮಂಡಲ ಅಧ್ಯಕ್ಷ ಲೋಕೇಶ್, ನಗರ ಮಂಡಲ ಅಧ್ಯಕ್ಷ ಗಣೇಶ್ ಮೂರಾರಿ, ನಗರ ಎಸ್ಸಿ ಮೋರ್ಚಾ ಅಧ್ಯಕ್ಷ ಎಸ್.ಸಿದ್ದಪ್ಪಾಜಿ, ನಗರಸಭೆ ಸದಸ್ಯೆ ಕವಿತಾ, ರಾಮಕೃಷ್ಣ, ಮಧುಚಂದ್ರ, ಶಂಕರ್, ವೈಕೆ ಮೋಳೆ ನಾಗರಾಜು, ತಾಪಂ ಮಾಜಿ ಉಪಾಧ್ಯಕ್ಷ ರವೀಶ್, ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯ ಬಾಗಳಿ ಮಲ್ಲೇಶ್, ಶ್ರೀಕಂಠಪ್ಪ, ರಾಮು ಮಾಂಬಳ್ಳಿ, ಬಾಲು ಪ್ರಸಾದ್, ಚಂದ್ರು, ಮರಿಸ್ವಾಮಿ ಮತ್ತಿತರಿದ್ದರು.