ಜಿಲ್ಲೆ

ಈ ಬಜೆಟ್ನಲ್ಲಿ ಜಿಲ್ಲೆ ಸಂಪೂರ್ಣ ನಿರ್ಲಕ್ಷ್ಯ: ಮಾಜಿ ಸಚಿವ ಎಚ್.ಡಿ.ರೇವಣ್ಣ

Hassan - Ramesh H R

ಹಾಸನ: ಜೆಡಿಎಸ್‌ನ ಭದ್ರಕೋಟೆಯಾಗಿರು ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ದೂರಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅನುಕೂಲವಾಗುವುದಿಲ್ಲ ಎಂಬ ಕಾರಣಕ್ಕೆ ಬಜೆಟ್‌ನಲ್ಲಿ ಜಿಲ್ಲೆಗೆ ಯಾವ ಯೋಜನೆಯನ್ನು ಘೋಷಿಸಿಲ್ಲ. ಕಳದ ಬಾರಿ ವಿಧಾನಸಭೆ ಚುನಾವಣೆ ಗೆಲ್ಲಲು ಘೋಷಿಸಿದ ಐದು ಗ್ಯಾರಂಟಿಗಳನ್ನಷ್ಟೇ ಆದ್ಯತೆಯಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿ ಮರೆತುಬಿಟ್ಟಿದೆ ಎಂದು ಹೇಳಿದರು.
ಹಾಸನ ರೈಲ್ವೆ ಮೇಲ್ಸೇತುವೆಗೆ 48 ಕೋಟಿ ರೂ., ವಿಮಾನ ನಿಲ್ದಾಣ ಕಾಮಗಾರಿ, ತೋಟಗಾರಿಕೆ ವಿಶ್ವವಿದ್ಯಾಲಯ, ರಸ್ತೆ ಕಾಮಗಾರಿಗೆ ಬಜೆಟ್‌ನಲ್ಲಿ ಆದ್ಯತೆ ದೊರೆಯುತ್ತದೆ ಎಂಬ ನಿರೀಕ್ಷೆಯಿತ್ತು.ಪ್ರವಾಸೋದ್ಯಮ ಚೇತರಿಕೆಗೆ ಗಮನ ಹರಿಸಬಹುದಿತ್ತು. ಹಳೇಬೀಡು, ಶ್ರವಣಬೆಳಗೊಳ ಹಾಗು ಬೇಲೂರಿನ ಚನ್ನಕೇಶವ ದೇವಾಲಯ ವಿಶ್ವಪ್ರಸಿದ್ಧ ತಾಣಗಳಾಗಿದ್ದು ಕ್ಷೇತ್ರ ಅಭಿವೃದ್ಧಿಗೆ ಗಮನ ಒತ್ತುನೀಡಿಲ್ಲ. ಬರದಿಂದ ಕುಡಿಯುವ ನೀರಿಗು ತತ್ವಾರ ಎದುರಾಗಿದೆ. ಈ ಬಜೆಟ್‌ನಲ್ಲಿ ಅನ್ನದಾತರನ್ನು ನಿರ್ಲಕ್ಷಿಸಲಾಗಿದೆ. ಒಟ್ಟಾರೆ ಈ ಬಜೆಟ್ ನಿರಾಶಾದಾಯಕವಾಗಿದೆ ಎಂದರು.
ಈ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ನಿರೀಕ್ಷಿಸುವಂತಿಲ್ಲ ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ. 24 ಹಾಗು ಮಾರ್ಚ್ 1ರಂದು ನಮ್ಮ ಅವಧಿಯಲ್ಲಿ ಆಗಿರುವ ಕಾಮಗಾರಿ ಉದ್ಘಾಟಿಸಲು ಬರುತ್ತಿದ್ದಾರೆ. ಆ ವೇಳೆಯಲ್ಲಾದರೂ ಹೊಸ ಯೋಜನೆಗಳನ್ನು ಘೋಷಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.