ಜಿಲ್ಲೆ

ಈ ಫಲಿತಾಂಶ ರಾಜ್ಯದ ಜನರ ಅಭಿಪ್ರಾಯ:ಸಚಿವ ಎನ್.ಎಸ್.ಭೋಸರಾಜು

 ಹಾಸನ: ಒಂದು ಭಾಗದಲ್ಲಿ ಉಪಚುನಾವಣೆ ಆಗಿದಿದ್ದರೆ ತೀರ್ಮಾನ ಬೇರೆ ಬೇರೆ ರೀತಿ ಇರುತ್ತೆ. ಆದರೆ ಈಗ ಕಲ್ಯಾಣ ಕರ್ನಾಟಕದಲ್ಲಿ ಸಂಡೂರು, ಉತ್ತರ ಕರ್ನಾಟಕದಲ್ಲಿ ಶಿಗ್ಗಾಂವಿ ಹಾಗೂ ಹಳೇ ಮೈಸೂರು ಭಾಗದಲ್ಲಿ ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ. ಮೂರು ಕ್ಷೇತ್ರಗಳ ತೀರ್ಮಾನ ಪರ ಅಥವಾ ವಿರೋಧವಾಗಿ ಬಂದರೆ ಅದು ರಾಜ್ಯದ ಜನರ ಅಭಿಪ್ರಾಯ ಎಂದೇ ಹೇಳಬಹುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಫಲಿತಾಂಶ ನಮ್ಮ ವಿರುದ್ಧ ಬಂದಿದ್ದರೆ ರಾಜ್ಯದ ಜನರು ನಮ್ಮ ಪರವಾಗಿದ್ದಾರೆ ಎಂದು ಹೇಳಲು ಆಗುತ್ತಿರಲಿಲ್ಲ. ಈಗ ಬಂದಿರುವ ಫಲಿತಾಂಶ ಇಡೀ ರಾಜ್ಯದ ಜನರ ಅಭಿಪ್ರಾಯವಾಗೊದೆ. ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದು ಲೋಕಸಭಾ ಕ್ಷೇತ್ರ ಗೆದ್ದೆವು. ಈ ಫಲಿತಾಂಶ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಕ್ರಮಗಳು, ಗ್ಯಾರೆಂಟಿಗಳಿಗೆ ಸಿಕ್ಕಿರುವ ಮನ್ನಣೆ. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದವು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈ ಸರ್ಕಾರ ದುರ್ಬಲಗೊಳಿಸಬೇಕು, ಸರ್ಕಾರ ತೆಗೆಯಬೇಕು, ಸರ್ಕಾರ ಉಳಿಯುವುದಿಲ್ಲ ಎಂದು ಪ್ರಚಾರ ಮಾಡಿದರು. ಆದರೆ, ಜನ ಅದಕ್ಕೆ ಮನ್ನಣೆ ಕೊಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಅಂತ ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಹೇಳುತ್ತಾ ಕನಸು ಕಾಣುತ್ತಿದ್ದಾರೆ. ಯಾರು ಏನೇ ಹೇಳಿದರು ಜನರು ಬುದ್ಧಿವಂತರು. ತಕ್ಕ ಉತ್ತರ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.

ಡಿಕೆಶಿ, ಡಿ.ಕೆ.ಸುರೇಶ್, ಯೋಗೆಶ್ವರ್ ಒಂದಾಗಿದ್ದು ಅನುಕೂಲವಾಯಿತು. ಒಂದು ಜಾತಿಯನ್ನು ಎಮೋಷನಲ್ ಮಾಡುವ ಪ್ರಯತ್ನ ಮಾಡಿದರು. ಮೊಮ್ಮಗನ ಸಲುವಾಗಿ ಈ ರೀತಿ ಚುನಾವಣೆ ಮಾಡಿದರು. ಕಾರ್ಯಕರ್ತರಾಗಿದ್ದರೆ ಈ ರೀತಿ ಚುನಾವಣೆ ಮಾಡುತ್ತಿರಲಿಲ್ಲ ಎಂದು ಜನರೇ ಹೇಳುತ್ತಿದ್ದರು. ಅದೇ ರೀತಿ ತೀರ್ಪು ಕೊಟ್ಟಿದ್ದಾರೆ. ಈ ಫಲಿತಾಂಶ ನೋಡಿದ ಮೇಲಾದರೂ ಬಿಜೆಪಿ-ಜೆಡಿಎಸ್ ಮುಖಂಡರು ಸರ್ಕಾರಕ್ಕೆ ಕೆಲಸ ಮಾಡಲು ಅವಕಾಶ ಕೊಡಬೇಕು. ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ವಕ್ಫ್ ವಿಚಾರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 216 ನೋಟಿಸ್ ಕೊಡಲಾಗಿತ್ತು. ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ರಕ್ಷಣೆ ಮಾಡುತ್ತೇವೆ ಅಂಥ ಹೇಳಿದ್ದರು. ಹಿಂದುಗಳಿಗೆ ಮಾತ್ರ ಮತ ಹಾಕಿ ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಅನೇಕ ಪ್ರಯತ್ನ ಮಾಡಿದರು. ಇಡೀ ರಾಜ್ಯದ ಜನ ಮೂರು ಉಪಚುನಾವಣೆಗಳ ಮೂಲಕ ಸಮಂಜಸವಾದ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.

ಚುನಾವಣೆಯಲ್ಲಿ ಸರ್ಕಾರ ಹಣದ ಹೊಳೆ ಹರಿಸಿದೆ ಎಂದು ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಆ ಜಾಗದಲ್ಲಿ ಯಾರೇ ಇದ್ದರೂ ಹಾಗೇ ಹೇಳುತ್ತಿದ್ದರು. ಅವರು ಏನು ಮಾಡಿದರು ಎಂಬುದು ನಮಗೂ ಗೊತ್ತಿದೆ. ಚನ್ನಪಟ್ಟಣದಲ್ಲಿ ಏನು ಮಾಡಿದರು ಎಂಬುದು ನಿಮಗೂ ಗೊತ್ತಿದೆ. ಜನಾರ್ದನ ರೆಡ್ಡಿಯನ್ನು ಕರೆದುಕೊಂಡು ಬಂದು ಅವರಿಗೆ ಉಸ್ತುವಾರಿ ಕೊಟ್ಟರು. ದುಡ್ಡು ಖರ್ಚ ಮಾಡಲಿ ಎಂದು ಹೀಗೆ ಮಾಡಿದ್ದರು. ಶ್ರೀರಾಮುಲು ಇದ್ದಾಗಲೂ ಜನಾರ್ದನ ರೆಡ್ಡಿ ಏಕೆ ಬೇಕಿತ್ತು? ಬಸವರಾಜ ಬೊಮ್ಮಾಯಿ ಅವರು ಕಡಿಮೆ ಖರ್ಚು ಮಾಡಿದ್ರಾ? ನಮಗಿಂತ ಎರಡರಷ್ಟು ಹೆಚ್ಚು ಖರ್ಚು ಮಾಡಿದ್ದಾರೆ. ಜವಾಬ್ದಾರಿ ಇರುವವರು ಹಣದ ಬಗ್ಗೆ ಮಾತನಾಡಬಾರದು ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರದ್ದು ಹಿಟ್ ಆ್ಯಂಡ್ ರನ್ ಕೇಸ್. ಜವಾಬ್ದಾರಿಯುತ ರಾಜಕಾರಣಿಗಳ ಮಾತಿನಲ್ಲಿ ಅರ್ಥ ಇರಬೇಕು. ಅವರು ಮಾತುಗಳು ಅವತ್ತಿಗೆ ನಡೆಯುತ್ತದೆ ಅಂದುಕೊಂಡಿದ್ದಾರೆ. ಎಲೆಕ್ಷನ್ ಟೈಮ್‌ನಲ್ಲಿ ವಿಡಿಯೋ ವೈರಲ್ ಆಗಿತ್ತು. ದೇವೇಗೌಡರ ಕುಟುಂಬ ಆಡಳಿತ ನಡೆಸಲು, ಅಧಿಕಾರಕ್ಕಾಗಿ ಏನೇನು ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ದೇವೇಗೌಡರು ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದರು. ಮೋದಿ ಪ್ರಧಾನಮಂತ್ರಿಯಾದರೆ ದೇಶ ಬಿಡುತ್ತೇನೆ ಎಂದಿದ್ದರು. ಕುಮಾರಸ್ವಾಮಿ ಪಂಚರತ್ನ ಎಂದು ಇಡೀ ರಾಜ್ಯ ಸುತ್ತಿದರು. 123 ಸ್ಥಾನ ಬರಲಿಲ್ಲ ಅಂದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಅಂದಿದ್ದರು. ಯಾವುದಾದರೂ ಒಂದನ್ನಾದರೂ ಮಾಡಿದರಾ? ಎಂದು ಟಾಂಗ್ ನೀಡಿದರು.

ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಕಾರ್ಯಕರ್ತರು ಕೂಗಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅವರಿಗೆ ಆಸೆ ಇರುತ್ತದೆ. ಎಲ್ಲರ ಜತೆಯಲ್ಲೂ ಕಾರ್ಯಕರ್ತರು ಇರುತ್ತಾರೆ. ಅವರು ಈಗ ಪಕ್ಷದ ಅಧ್ಯಕ್ಷರಾಗಿದ್ದಾರೆ. ಕಾರ್ಯಕರ್ತರು ಉತ್ಸಾಹದಿಂದ ಘೋಷಣೆ ಕೂಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 140 ವರ್ಷ ಇತಿಹಾಸವಿದೆ. ಕೇಂದ್ರದ ನಾಯಕತ್ವ ಬಹಳ ಗಟ್ಟಿಯಾಗಿದೆ. ಸಂದರ್ಭ ಬಂದಾಗ ಯಾರನ್ನು, ಎಲ್ಲಿ ಮಾಡಬೇಕು? ಯಾವ ರೀತಿ ಮಾಡಬೇಕು? ಯಾರನ್ನು ಮುಂದುವರಿಸಬೇಕು? ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈಗ ಆ ಪ್ರಶ್ನೆ ಅಪ್ರಸ್ತುತ. ಸದ್ಯಕ್ಕೆ ಯಾವುದೇ ಬದಲಾವಣೆಗಳಿಲ್ಲ. ಸರ್ಕಾರ ಉತ್ತಮವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.